ADVERTISEMENT

ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ

ಪಿಟಿಐ
Published 20 ಮೇ 2018, 7:21 IST
Last Updated 20 ಮೇ 2018, 7:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 33 ಪೈಸೆ ಹಾಗೂ 26 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಕಳೆದ ಏಳು ದಿನಗಳಿಂದ ಪೆಟ್ರೋಲ್‌, ಡೀಸೆಲ್ ದರವನ್ನು ಸತತವಾಗಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ, ವಾರದ ಅವಧಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹1.61ರಷ್ಟು ಏರಿಕೆಯಾಗಿದ್ದು, ಡೀಸೆಲ್ ದರ ₹1.64ರಷ್ಟು ಹೆಚ್ಚಳವಾಗಿದೆ.

ಪ್ರತಿ ದಿನ ತೈಲ ಬೆಲೆ ಪರಿಷ್ಕರಿಸುವ ನಿಯಮ 2017ರ ಜೂನ್ ಮಧ್ಯದಲ್ಲಿ ಜಾರಿಗೆ ಬಂದಿತ್ತು. ನಿಯಮ ಜಾರಿಯಾದ ನಂತರ ಪೆಟ್ರೋಲ್ ದರವನ್ನು ದಿನವೊಂದರಲ್ಲಿ ಪ್ರತಿ ಲೀಟರ್‌ಗೆ 33 ಪೈಸೆಯಷ್ಟು ಹೆಚ್ಚಳ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

ADVERTISEMENT

ಸದ್ಯ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹76.24 ಮತ್ತು ಒಂದು ಲೀಟರ್ ಡೀಸೆಲ್ ದರ ₹67.57 ಆಗಿದೆ. 2013ರ ಸೆಪ್ಟೆಂಬರ್‌ 14ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.06 ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು.

ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿದ್ದು, ವಿವಿಧ ರಾಜ್ಯಗಳಲ್ಲಿ ದರ ವ್ಯತ್ಯಾಸವಿದೆ. ಮೆಟ್ರೊ ನಗರಗಳ ಪೈಕಿ ದೆಹಲಿಯಲ್ಲಿ ದರ ಅತಿ ಕಡಿಮೆಯಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಮೇ 14ರಿಂದ ಮತ್ತೆ ದರ ಪರಿಷ್ಕರಣೆ ಆರಂಭಿಸಲಾಗಿತ್ತು. ಮೇ 14ರಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 17 ಪೈಸೆ ಮತ್ತು 21 ಪೈಸೆ ಹೆಚ್ಚಳ ಮಾಡಲಾಗಿತ್ತು. ನಂತರ ಪ್ರತಿ ದಿನವೂ ತೈಲ ಬೆಲೆ ಏರಿಕೆಯಾಗುತ್ತಲೇ ಬಂದಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.