ADVERTISEMENT

ಪೊಲೀಸ್ ಅಧಿಕಾರಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಲಖನೌ:  ಸೋನಿಯಾ ಅಳಿಯ ರಾಬರ್ಟ್ ವಾದ್ರಾ ವಿರುದ್ಧದ ಭೂವ್ಯವಹಾರಗಳ ತನಿಖೆಗೆ ಆದೇಶ ನೀಡಿದ್ದಕ್ಕೆ ಎತ್ತಂಗಡಿ ಶಿಕ್ಷೆಗೆ ಒಳಗಾದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಂತೆಯೇ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಒಡೆತನದ ಸ್ವಯಂಸೇವಾ ಸಂಸ್ಥೆಯ ಅಕ್ರಮಗಳನ್ನು ವಿಚಾರಣೆ ನಡೆಸಿ ಈ ಸಂಬಂಧ ಎಫ್‌ಐಆರ್ ದಾಖಲಿಸಲು ಅಣಿಯಾಗುತ್ತಿದ್ದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗೂ ದಿಢೀರ್ ವರ್ಗಾವಣೆಯ ಬಿಸಿ ಮುಟ್ಟಿಸಲಾಗಿದೆ.

ಖುರ್ಷಿದ್ ಹಾಗೂ ಅವರ ಪತ್ನಿ ಲೂಸಿ ನಡೆಸುತ್ತಿರುವ ಝಕೀರ್ ಹುಸೇನ್ ಟ್ರಸ್ಟ್ ಅಂಗವಿಕಲರಿಗೆ ಶಿಬಿರಗಳನ್ನು ನಡೆಸದೆ, ಅವರಿಗೆ ಉಪಕರಣಗಳನ್ನು ವಿತರಿಸದೆಯೇ ಕೇಂದ್ರ ಸರ್ಕಾರದಿಂದ ಲಕ್ಷಾಂತರ ಹಣ ಪಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೈಯಿನ್‌ಪುರಿ ಪಟ್ಟಣದ ಪೊಲೀಸ್ ಅಧಿಕಾರಿ ಅಲೋಕ ಕುಮಾರ್ ವಿಚಾರಣೆ ಕೈಗೊಂಡು ಶೀಘ್ರದಲ್ಲೇ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದರು.

ಅಂಗವಿಕಲರಿಗೆ ಸೈಕಲ್‌ಗಳನ್ನು ವಿತರಿಸದೆಯೇ ಖುರ್ಷಿದ್ ತಪ್ಪು ಮಾಹಿತಿ ನೀಡಿ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ವಿವಿಧ ಅಂಗವಿಕಲರು ದೂರು ನೀಡಿ ರಸ್ತೆ ತಡೆ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಅಲೋಕ ಕುಮಾರ್ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಇದೀಗ ಅಲೋಕ ಕುಮಾರ್ ಅವರನ್ನು ಲಖನೌದಲ್ಲಿರುವ ಪೊಲೀಸ್ ವಿಶೇಷ ಕಾರ್ಯಪಡೆಗೆ ನಿಯೋಜಿಸಲಾಗಿದೆ.

ಮೈಯಿನ್‌ಪುರಿಯಲ್ಲೂ ತಮ್ಮ ಟ್ರಸ್ಟ್ ಶಿಬಿರಗಳನ್ನು ಕೈಗೊಂಡು ಅಂಗವಿಕಲರಿಗೆ ಉಪಕರಣ ವಿತರಿಸಿದೆ ಎಂದು ಖುರ್ಷಿದ್ ತಿಳಿಸಿದ್ದರು. ಖುರ್ಷಿದ್ ಟ್ರಸ್ಟ್ ಅಕ್ರಮಗಳ ಕುರಿತು ಈಗಾಗಲೆ ಉತ್ತರ ಪ್ರದೇಶದ ಆರ್ಥಿಕ ಅಪರಾಧಗಳ ದಳ ವಿಚಾರಣೆ ಕೈಗೊಂಡಿದ್ದು, ತನಿಖೆ ಕಾರ್ಯ ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.