ADVERTISEMENT

ಪೋಲಿಯೊ: ಪಟ್ಟಿಯಿಂದ ಭಾರತ ಮುಕ್ತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ನವದೆಹಲಿ: ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಪೋಲಿಯೊ ಪ್ರಕರಣವನ್ನು ಕಾಣದ ಭಾರತವನ್ನು ಪೋಲಿಯೊ ರಾಷ್ಟ್ರಗಳ ಪಟ್ಟಿಯಿಂದ ಶನಿವಾರ ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ.

ಇಲ್ಲಿ ನಡೆದ ಪೋಲಿಯೊ ಶೃಂಗಸಭೆ-2012ರಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತಿಯಲ್ಲಿ ಈ ವಿಷಯವನ್ನು ಭಾರಿ ಚಪ್ಪಾಳೆ ನಡುವೆ ಪ್ರಕಟಿಸಿದರು.

ಈ ಸಂಬಂಧದ ಡಬ್ಲುಎಚ್‌ಒ  ಪತ್ರ ಶನಿವಾರ ಬೆಳಿಗ್ಗೆ ತಮ್ಮ ಕೈಸೇರಿರುವುದಾಗಿ ಅವರು ತಿಳಿಸಿದರು.
ಈ ಮುನ್ನ ಪೋಲಿಯೊ ಪಟ್ಟಿಯಲ್ಲಿದ್ದ ನಾಲ್ಕು ರಾಷ್ಟ್ರಗಳಲ್ಲಿ ಭಾರತವು ಒಂದಾಗಿತ್ತು. ಇದೀಗ ಭಾರತ ಪಟ್ಟಿಯಿಂದ ಹೊರಬರುವುದರೊಂದಿಗೆ ಪಾಕಿಸ್ತಾನ, ನೈಜೀರಿಯಾ ಮತ್ತು ಆಘ್ಘಾನಿಸ್ತಾನ ಮಾತ್ರ ಆ ಪಟ್ಟಿಯಲ್ಲಿ  ಉಳಿದಿವೆ.
2012ರ ಜನವರಿ 13ರಂದು ಪಶ್ಚಿಮ ಬಂಗಾಳದಲ್ಲಿ ಕಡೆಯ ಪ್ರಕರಣ ವರದಿಯಾಗಿತ್ತು. ಅದಾದ ನಂತರ ಒಂದೂ ಪ್ರಕರಣ ಪತ್ತೆಯಾಗಿಲ್ಲ.

2009ರಲ್ಲಿ 741, ಜಗತ್ತಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದರೆ, 2010ರಲ್ಲಿ ಜಗತ್ತಿನಲ್ಲಿ ವರದಿಯಾದ 1352ರಲ್ಲಿ 42 ಪ್ರಕರಣಗಳು ಭಾರತದಲ್ಲಿ ವರದಿಯಾಗಿದ್ದವು. ಭಾರತದಲ್ಲಿ 12 ತಿಂಗಳಲ್ಲಿ ಒಂದೂ ಪೋಲಿಯೊ ಪ್ರಕರಣ ಸಂಭವಿಸದೇ ಇರುವುದಕ್ಕೆ 23 ಲಕ್ಷ ಸ್ವಯಂಪ್ರೇರಿತರ ಶ್ರಮವೇ ಕಾರಣ ಎಂದು ಪ್ರಧಾನಿ ಸಿಂಗ್ ಶ್ಲಾಘಿಸಿದರು.

ಆದರೆ ರಾಷ್ಟ್ರ `ಪೋಲಿಯೊ ಮುಕ್ತ ಸ್ಥಾನಮಾನ~ ಪಡೆಯಬೇಕಾದರೆ ಇನ್ನೂ ಎರಡು ವರ್ಷ ಕಾಲ ದೇಶದ ಯಾವುದೇ ಭಾಗದಲ್ಲಿ ಯಾವುದೇ ಪೋಲಿಯೊ ಪ್ರಕರಣ ಸಂಭವಿಸಿದಂತೆ ಜಾಗ್ರತೆ ವಹಿಸಬೇಕಿದೆ. ಇದನ್ನು ಸಾಧಿಸಲು ಸಂಘಟಿತ ಪ್ರಯತ್ನ ಹಾಗೂ ತುರ್ತು ಸಿದ್ಧತೆ ಅಗತ್ಯ. ಹಲವು ರಾಷ್ಟ್ರಗಳು ಪೋಲಿಯೊ ಮುಕ್ತವಾಗಿದ್ದರೂ ಭೂಮಿ ಮೇಲೆ ವೈರಸ್ ಇರುವ ತನಕ ಎಲ್ಲ ರಾಷ್ಟ್ರಗಳು ನಿರಂತರ ನಿಗಾ ವಹಿಸಬೇಕು ಎಂದು  ಭಾರತದಲ್ಲಿ ಡಬ್ಲುಎಚ್‌ಒ ಪ್ರತಿನಿಧಿ ನತೇಲಾ ಮೆನಬ್ಡೆ ಹೇಳಿದ್ದಾರೆ.

ಭಾರತ ಪೋಲಿಯೊ ವೈರಸ್ ಮುಕ್ತವಾಗಿದ್ದರೂ ಪಾಕಿಸ್ತಾನದಿಂದ ವೈರಸ್ ಪಸರಿಸುವ ಸಾಧ್ಯತೆ ಇದೆ. ಆದರೆ ಗಡಿ ಸೇನಾ ನೆಲೆಗಳಾದ ವಾಘಾ, ಅಟ್ಟರಿ ಮತ್ತು ಮುನಾಬೊಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು ಇದನ್ನು ಎದುರಿಸಬಹುದು ಎಂದು ಡಬ್ಲ್ಯುಎಚ್‌ಒ ಸಹಾಯಕ ಮಹಾ ನಿರ್ದೇಶಕ ಬ್ರೂಸ್ ಅಯಿಲ್‌ವಾರ್ಡ್ ಅಭಿಪ್ರಾಯಪಟ್ಟರು.

ಪೋಲಿಯೊ ಆಂದೋಲನಕ್ಕೆ 100 ಕೋಟಿ ಡಾಲರ್‌ನಷ್ಟು ನಿಧಿ ಕೊರತೆ ಇರುವುದು ಅಡ್ಡಿಯಾಗಿದೆ. ಜಿ  8 ರಾಷ್ಟ್ರಗಳನ್ನು ಹೆಚ್ಚಿನ ನೆರವು ನೀಡುವಂತೆ ಕೋರಲಾಗುವುದು. ಆದರೆ ಪ್ರಸ್ತುತ ಆರ್ಥಿಕ ಸ್ಥಿತಿಯಲ್ಲಿ ಜಿ 8 ರಾಷ್ಟ್ರಗಳಿಗೆ ನಿಧಿ ಒದಗಿಸುವುದು ಕಷ್ಟವಾಗಬಹುದು ಎಂದು ಅಯಿಲ್‌ವಾರ್ಡ್ ಹೇಳಿದರು.

ಪೋಲಿಯೊ ಹನಿ ಜತೆಗೆ ಐಪಿವಿ ಚುಚ್ಚುಮದ್ದು?
ನವದೆಹಲಿ: ಇಡೀ ಜಗತ್ತನ್ನು ಪೋಲಿಯೊ ಮುಕ್ತಗೊಳಿಸುವ ನಿಟ್ಟಿನಲ್ಲಿ,  ಬಾಯಿಗೆ ಲಸಿಕೆ ಹನಿ ಹಾಕುವ ಜತೆಗೆ ಐಪಿವಿ ಚುಚ್ಚುಮದ್ದನ್ನೂ (ಇನ್‌ಆಕ್ಟಿವೇಟೆಡ್ ಪೋಲಿಯೊ ವೈರಸ್ ವ್ಯಾಕ್ಸಿನ್) ನೀಡುವ ಪದ್ಧತಿ ಭವಿಷ್ಯದಲ್ಲಿ ಜಾರಿಯಾಗಬಹುದು.
 
ಈಗಿರುವ ಯೋಜನೆಯಂತೆ ಎಲ್ಲವೂ ಮುಂದುವರಿದರೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಭಾರತದಲ್ಲಿ ಇದನ್ನು 2014ರಿಂದ ಜಾರಿಗೆ ತರುವಂತೆ ಶಿಫಾರಸು ಮಾಡಬಹುದು ಎಂದು ಡಬ್ಲ್ಯುಎಚ್‌ಒ ಪೋಲಿಯೊ ನಿವಾರಣಾ ಕಾರ್ಯಕ್ರಮದ ಸಹಾಯಕ ಮಹಾ ನಿರ್ದೇಶಕ ಬ್ರೂಸ್ ಅಯಿಲ್‌ವಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.