ADVERTISEMENT

ಪ್ರಣವ್ ನಾಮಪತ್ರ ಅಂಗೀಕಾರ, ಸಂಗ್ಮಾ ಆಕ್ಷೇಪ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 12:05 IST
Last Updated 3 ಜುಲೈ 2012, 12:05 IST
ಪ್ರಣವ್ ನಾಮಪತ್ರ ಅಂಗೀಕಾರ, ಸಂಗ್ಮಾ ಆಕ್ಷೇಪ ತಿರಸ್ಕೃತ
ಪ್ರಣವ್ ನಾಮಪತ್ರ ಅಂಗೀಕಾರ, ಸಂಗ್ಮಾ ಆಕ್ಷೇಪ ತಿರಸ್ಕೃತ   

ನವದೆಹಲಿ (ಐಎಎನ್ಎಸ್): ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಣವ್ ಮುಖರ್ಜಿ ಅವರ ನಾಮಪತ್ರ ಮಂಗಳವಾರ ಅಂಗೀಕೃತವಾಗಿದ್ದು, ಇದರ ಜೊತೆಗೇ ಲಾಭದ ಹುದ್ದೆ ಹೊಂದಿರುವ ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬೇಕೆಂಬುದಾಗಿ ವಿರೋಧಿ ಅಭ್ಯರ್ಥಿ ಪಿ.ಎ. ಸಂಗ್ಮಾ ಅವರು ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿದೆ.

~ಪ್ರಣವ್ ಮುಖರ್ಜಿ ಅವರ ನಾಮಪತ್ರವನ್ನು ಅಂಗೀಕರಿಸಲಾಗಿದೆ. ಭಾರತೀಯ ಅಂಕಿಸಂಖ್ಯಾ ಸಂಸ್ಥೆಗೆ ನೀಡಿರುವ ರಾಜೀನಾಮೆ ಕ್ರಮಬದ್ಧವಾಗಿದೆ~ ಎಂದು ಮುಖರ್ಜಿ ಅವರ ಚುನಾವಣಾ ಏಜೆಂಟ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ವರದಿಗಾರರಿಗೆ ತಿಳಿಸಿದರು.

 ಪ್ರಣವ್ ಮುಖರ್ಜಿ ಅವರು ಕೋಲ್ಕತ್ತಾದ ಭಾರತೀಯ ಅಂಕಿಸಂಖ್ಯಾ ಸಂಸ್ಥೆಯ (ಐಎಸ್ ಐ) ಅಧ್ಯಕ್ಷರಾಗಿದ್ದು ಲಾಭದ ಹುದ್ದೆ ಹೊಂದಿದ್ದಾರೆ. ಈ ಕಾರಣ ಅವರ ನಾಮಪತ್ರವನ್ನು ನಿರಾಕರಿಸಬೇಕು ಎಂದು ಸಂಗ್ಮಾ ಅವರ ತಂಡವು ಸೋಮವಾರ ಒತ್ತಾಯಿಸಿದ್ದರಿಂದ ವಿವಾದ ಉಂಟಾಗಿತ್ತು.

ಐಎಸ್ ಐ ನಂತರ ಹೇಳಿಕೆ ನೀಡಿ ಮುಖರ್ಜಿ ಅವರು ಜೂನ್ 20ರಂದು ರಾಜೀನಾಮೆ ನೀಡಿದ್ದಾರೆ ಎಂದು ಪ್ರಕಟಿಸಿತ್ತು. ವಿವಾದದ ಮಧ್ಯೆ ನಾಮಪತ್ರ ಪರಿಶೀಲನೆಯ ದಿನಾಂಕವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿತ್ತು.

ಹಲವಾರು ವಿರೋಧ ಪಕ್ಷಗಳ ಬೆಂಬಲ ಪಡೆದಿರುವ ಸಂಗ್ಮಾ ಅವರ ನಾಮಪತ್ರವನ್ನೂ ನಿರ್ವಚನಾಧಿಕಾರಿಗಳು ಈದಿನ ಬೆಳಗ್ಗೆ ಅಂಗೀಕರಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.