ADVERTISEMENT

ಪ್ರತ್ಯೇಕತಾವಾದಿಗಳ ಪ್ರತಿಭಟನೆ ಅಂತ್ಯ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ನಾಗರಿಕರ ಹತ್ಯೆ ಖಂಡಿಸಿ ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಪ್ರತ್ಯೇಕತಾವಾದಿಗಳು ನಿರ್ಧರಿಸಿದ್ದಾರೆ.

ಇದರಿಂದಾಗಿ ಕಣಿವೆಯಲ್ಲಿನ ಜನಜೀವನ ಬುಧವಾರದಿಂದ ಸಹಜ ಸ್ಥಿತಿಗೆ ಮರಳಲಿದೆ.

‘ಜನರು ತಮ್ಮ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಬಹುದು. ಆದರೆ, ಪ್ರತಿ ಹಂತದಲ್ಲಿಯೂ ಕಪ್ಪು ಬಾವುಟ ಪ್ರದರ್ಶಿಸಬೇಕು ಇಲ್ಲವೇ ಕಪ್ಪು ಪಟ್ಟಿ ತೊಟ್ಟು ಹೋರಾಟಕ್ಕೆ ತಮ್ಮ ಬದ್ಧತೆ ತೋರಿಸಬೇಕು’ ಎಂದು ಪ್ರತ್ಯೇಕತಾವಾದಿ ಸಂಘಟನೆಗಳ ಜಂಟಿ ಒಕ್ಕೂಟದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸರ್ವ ಪಕ್ಷಗಳ ಸಭೆ: ಕಾಶ್ಮೀರ ಕಣಿವೆ ಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬುಧವಾರ ಎಲ್ಲ ಪಕ್ಷಗಳ ಸಭೆ ಕರೆದಿದ್ದಾರೆ.

ಬಂಧನ: ಬಾರಾಮುಲ್ಲಾದಲ್ಲಿ ಕಳೆದ ವಾರ ಮೂವರು ಯುವಕರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಉಗ್ರರು ಹಾಗೂ ಈ ಕೃತ್ಯದಲ್ಲಿ ಉಗ್ರರಿಗೆ ನೆರವಾದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ನಾಗರಿಕರ ಸಂಖ್ಯೆ ಆರು: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ಹಾಗೂ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರ ಮಧ್ಯೆ ನಡೆದ ಚಕಮಕಿಯಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ ಆರಕ್ಕೆ ಏರಿದೆ.

ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಭಾನುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ಐವರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಕೊಂದು ಹಾಕಿದ್ದವು. ಈ ಸಂದರ್ಭದಲ್ಲಿ ಕಾರ್ಯಾಚರಣೆ ಸ್ಥಳದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಪ್ರತಿಭಟನಾಕಾರರೊಂದಿಗೆ ನಡೆದ ಚಕಮಕಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದರು.

ಮೈತ್ರಿಯಿಂದ ಹೊರ ಬನ್ನಿ:ಚಿದಂಬರಂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಅಶಾಂತಿ ಮುಂದುವರಿದಿದೆ. ಪಿಡಿಪಿ– ಬಿಜೆಪಿ ಅಪವಿತ್ರ ಮೈತ್ರಿ ಕಣಿವೆಯ ಜನರಿಗೆ ಭಾರಿ ಪ್ರಚೋದನೆ ನೀಡುತ್ತಿದ್ದು, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕೂಡಲೇ ಮೈತ್ರಿಯಿಂದ ಹೊರಬರಬೇಕು ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ಇಂದಿನ ದುರಂತದ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಮಿಲಿಟರಿ ಬಳಸಿಕೊಂಡು ಬಲಪ್ರಯೋಗ ಮಾಡುತ್ತಿರುವುದು ಕಾರಣ. ಆದ್ದರಿಂದ ಮುಫ್ತಿ ಅವರು ಕೂಡಲೇ ಮೈತ್ರಿ ಮುರಿದುಕೊಂಡು ಹೊರಬಂದು, ತಮ್ಮ ತಂದೆಯ ತತ್ವದ ಹಾದಿಯಲ್ಲಿ ಮುನ್ನಡೆಯಬೇಕು. ಜನರ ಬಳಿ ಹೋಗಬೇಕು’ ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.