ADVERTISEMENT

ಪ್ರತ್ಯೇಕ ಕೊಠಡಿಗೆ ಅಶೋಕ ಪಟ್ಟು

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಪ್ರತ್ಯೇಕ ಕೊಠಡಿಗೆ ಅಶೋಕ ಪಟ್ಟು
ಪ್ರತ್ಯೇಕ ಕೊಠಡಿಗೆ ಅಶೋಕ ಪಟ್ಟು   

ನವದೆಹಲಿ: ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಸಚಿವ ಸ್ಥಾನ ಹಾಗೂ ಖಾತೆಗಳ ಹಂಚಿಕೆಗೆ ನಡೆದಿರುವ ಪೈಪೋಟಿ ನಿವಾರಿಸುವ ಮೊದಲೇ, `ದೆಹಲಿ ಕರ್ನಾಟಕ ಭವನದಲ್ಲಿ~ ಪ್ರತ್ಯೇಕ ಕೊಠಡಿಗಾಗಿ ಮತ್ತೊಂದು ರೀತಿ ಹೋರಾಟ ಆರಂಭವಾಗಿದೆ.

ನಾಲ್ಕು ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ಆರ್. ಅಶೋಕ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಭವನದಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡಬೇಕೆಂದು ಶನಿವಾರ ಕೇಳಿದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಪರೂಪದ ಪರಿಸ್ಥಿತಿಯೊಂದು ಎದುರಾಯಿತು.

ಶನಿವಾರ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಜತೆ ದೆಹಲಿಗೆ ಬಂದ ಅಶೋಕ ರಾತ್ರಿ ತಂಗಲು ಭವನಕ್ಕೆ ಧಾವಿಸಿದರು. ಉಪ ಮುಖ್ಯಮಂತ್ರಿಗೆ ಶಿಷ್ಟಾಚಾರ ಅನ್ವಯ ಲಭ್ಯವಿರುವ ಸೌಲಭ್ಯಗಳನ್ನು ಕುರಿತು ವಿಚಾರಿಸಿದರು. ತಾವು ಉಳಿದ ಸಚಿವರಿಗಿಂತ ಉನ್ನತ ಸ್ಥಾನದಲ್ಲಿ ಇರುವುದರಿಂದ ಮುಖ್ಯಮಂತ್ರಿಗಳಂತೆ ಪ್ರತ್ಯೇಕ `ಸೂಟ್~ ಮೀಸಲಿಡಬಾರದೇಕೆ ಎಂದು ಕೇಳಿದರು.

ಅದಕ್ಕೆ ಶಿಷ್ಟಾಚಾರ ನಿಯಮದಲ್ಲಿ ಅವಕಾಶವಿಲ್ಲ. ಸಚಿವರಿಗಾಗಿರುವ ಪ್ರತ್ಯೇಕ ಬಾಲ್ಕನಿ ಹೊಂದಿರುವ ಕೊಠಡಿಯನ್ನು ಕೊಡಬಹುದು ಅಷ್ಟೇ ಎಂದು ಸಿಬ್ಬಂದಿ ಮತ್ತು ಅಧಿಕಾರಿಗಳು ಮನವರಿಕೆ ಮಾಡಲು ಪ್ರಯತ್ನಿಸಿದರು. ಭವನದ ಹಳೆ ಕಟ್ಟಡದಲ್ಲಿರುವ ಮುಖ್ಯಮಂತ್ರಿ ಸೂಟ್ ಅನ್ನು ಏಕೆ ಕೊಡಬಾರದು ಎಂದು ಅಶೋಕ ಕೇಳಿದರು.

ಪ್ರತ್ಯೇಕ ಡೈನಿಂಗ್ ಹಾಲ್, ಅಡುಗೆ ಕೋಣೆ ಹಾಗೂ ಸಭಾಂಗಣ ಹೊಂದಿರುವ ಈ ಸೂಟ್‌ನ ದುರಸ್ತಿ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಸಲ ನೀವು ಬರುವುದರೊಳಗೆ ತೀರ್ಮಾನ ಮಾಡುವುದಾಗಿ ಭವನದ ಅಧಿಕಾರಿಗಳು ಅಶೋಕ ಅವರಿಗೆ ಭರವಸೆ ನೀಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಉಪ ಮುಖ್ಯಮಂತ್ರಿ ಸ್ಥಾನ ಸಂವಿಧಾನಾತ್ಮಕ ಹುದ್ದೆಯಲ್ಲ. ಆಡಳಿತದ ದೃಷ್ಟಿಯಿಂದ ಮಾಡಿಕೊಂಡಿರುವ ಆಂತರಿಕ ವ್ಯವಸ್ಥೆ ಅಷ್ಟೇ. ಹೀಗಾಗಿ ಸಚಿವರಿಗಿಂತ ಹೆಚ್ಚಿನ ಸೌಲಭ್ಯವೇನು ಈ ಹುದ್ದೆಗಿಲ್ಲ. ಅಲ್ಲದೆ, ಶೆಟ್ಟರ್ ಸಂಪುಟದಲ್ಲಿ ಎರಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲಾಗಿದೆ. ಮತ್ತೊಬ್ಬ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರೂ ಇಂತಹದೇ ಬೇಡಿಕೆ ಮುಂದಿಟ್ಟರೆ ಏನು ಮಾಡಬೇಕು ಎಂಬುದು ಅಧಿಕಾರಿಗಳ ಪೀಕಲಾಟ.

ಹೀಗಾಗಿ ಅಶೋಕ ಅವರ ಬೇಡಿಕೆಯನ್ನು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲು ಭವನದ ಅಧಿಕಾರಿಗಳು ಉದ್ದೇಶಿಸಿದ್ದಾರೆ. ಭವನದ `ಅನೆಕ್ಸ್~ ಕಟ್ಟಡದ ಮುಖ್ಯಮಂತ್ರಿ ಸೂಟ್ ಪಕ್ಕದಲ್ಲಿ ರಾಜ್ಯಪಾಲರಿಗಾಗಿ ಮತ್ತೊಂದು ಸೂಟ್ ನಿರ್ಮಿಸಲಾಗಿದೆ. ಇದು ಮುಖ್ಯಮಂತ್ರಿ ಸೂಟ್‌ಗೆ ಹೋಲಿಸಿದರೆ ಚಿಕ್ಕದು. ಅಲ್ಲಿಗೆ ಹೋಗಲು ಭಾರದ್ವಾಜ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅದು ಹಾಗೇ ಖಾಲಿ ಉಳಿದಿದೆ. ಈ ಸೂಟ್ ಅನ್ನು ಯಾರಿಗೆ ಕೊಡಬೇಕು ಎಂಬ ಪ್ರಶ್ನೆ ಬಗೆಹರಿದಿಲ್ಲ.

ಶಿಷ್ಟಾಚಾರ ನಿಯಮದ ಪ್ರಕಾರ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮಾತ್ರ ಪ್ರತ್ಯೇಕ ಸೂಟ್ ಮೀಸಲಿಡಲು ಅವಕಾಶವಿದೆ. ಸಚಿವರಿಗೆ ಉಳಿದ ಹತ್ತು ಕೋಣೆಗಳನ್ನು ನೀಡಬಹುದಾಗಿದೆ.

ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನದ ಹಿಂದಿನ ಭಾಗದಲ್ಲಿ ರಾಜ್ಯದಿಂದ  ಬರುವ ಸರ್ಕಾರದ ಗಣ್ಯಾತಿಗಣ್ಯರಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. 2007ರಲ್ಲಿ ಆರಂಭವಾದ ಕಟ್ಟಡ ನಿರ್ಮಾಣ 2010ರಲ್ಲಿ ಮುಗಿದಿದೆ. ಇದರ ಮೂಲ ಅಂದಾಜು ರೂ 13ಕೋಟಿ ಮುಗಿದಾಗ ಆದ ವೆಚ್ಚ ರೂ 37 ಕೋಟಿ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.