ADVERTISEMENT

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ: ರಸ್ತೆ ತಡೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಹೈದರಾಬಾದ್ (ಪಿಟಿಐ): ಸಂಸತ್ತಿನ ಆಯವ್ಯಯ ಅಧಿವೇಶನದ ವೇಳೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಮಸೂದೆ ರಚಿಸಬೇಕೆಂದು ಆಗ್ರಹಿಸಿ ಟಿಆರ್‌ಎಸ್, ಬಿಜೆಪಿ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಸೋಮವಾರ ತೆಲಂಗಾಣ ಪ್ರಾಂತ್ಯದ ಹಲವೆಡೆ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ತೆಲಂಗಾಣ ರಾಜಕೀಯ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಕರೆ ನೀಡಿದ್ದ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ತೆಲಂಗಾಣ ಪರ ಬೆಂಬಲಿಗರು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಈ ಪ್ರಾಂತ್ಯದ ಹಲವು ಪಟ್ಟಣ ಮತ್ತು ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಜೆಎಸಿ ಸಂಚಾಲಕ ಎಂ.ಕೋದಂಡರಾಮ್, ಬಿಜೆಪಿ ಮುಖಂಡ ಎನ್. ಇಂದ್ರಸೇನಾ ರೆಡ್ಡಿ ಮತ್ತು ಇತರ ಹಲವಾರು ಮುಖಂಡರು ವಾಹನನಿಬಿಡ ಪ್ರದೇಶವಾದ ಎಲ್.ಬಿ.ನಗರ ಜಂಕ್ಷನ್‌ನಲ್ಲಿ ರಸ್ತೆತಡೆ ನಡೆಸಿದರು.

ADVERTISEMENT

ತೆಲಂಗಾಣ ರಾಜ್ಯ ರಚನೆ ಸಂಬಂಧ ಮಸೂದೆ ಸಿದ್ಧಪಡಿಸುವಂತೆ ಒತ್ತಾಯಿಸಿದ ಕೋದಂಡರಾಮ್, ಕೇಂದ್ರ ಇದೇ ಧೋರಣೆ ಮುಂದುವರೆಸಿದರೆ ಜ.21 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಂತರ ಪೊಲೀಸರು ಕೋದಂಡರಾಮ್ ಹಾಗೂ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಂಡರು.

ಟಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ್ ಅವರ ಪುತ್ರ ಹಾಗೂ ಶಾಸಕ ಕೆ.ಟಿ.ರಾಮರಾವ್ ತಮ್ಮ ಸಿರ್ಸಿಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿದರು. ಟಿಆರ್‌ಎಸ್ ಶಾಸಕ ಡಿ.ವಿನಯ್ ಭಾಸ್ಕರ್ ಮತ್ತು ಬಿಜೆಪಿ ಮುಖಂಡರು ವಾರಂಗಲ್‌ನಲ್ಲಿ ರಸ್ತೆತಡೆ ನಡೆಸಿದರೆ, ಟಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ್ ಅವರ ಸಂಬಂಧಿ ಟಿ.ಹರೀಶ್ ರಾವ್ ಮೇದಕ್ ಜಿಲ್ಲೆಯಲ್ಲಿ ಪ್ರತಿಭಟನೆ ಆಯೋಜಿಸಿದ್ದರು.

ಆದರೆ ಪ್ರತಿಭಟನೆ ಸಣ್ಣ ಪ್ರಮಾಣದ್ದಾಗಿದ್ದರಿಂದ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್ ಆರ್‌ಟಿಸಿ) ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಬಸ್ ಅಥವಾ ವಾಹನವನ್ನು 30 ನಿಮಿಷಕ್ಕಿಂತ ಹೆಚ್ಚು ವೇಳೆ ತಡೆಹಿಡಿದ ವರದಿಯಾಗಿಲ್ಲ. ಸಂಚಾರ ಎಂದಿನಂತೆಯೇ ಇತ್ತು. ಪ್ರತಿನಿತ್ಯ  ಸುಮಾರು 1,000 ಬಸ್‌ಗಳು ಹೈದರಾಬಾದ್ ಪ್ರವೇಶಿಸುತ್ತಿದ್ದು, ಇಂದೂ ಅದು ಮುಂದುವರೆದಿದೆ.  ಕಮ್ಮಮ್ ಪ್ರದೇಶದಲ್ಲಿ ಮಾತ್ರ ಬಸ್ ಸಂಚಾರಕ್ಕೆ ದೀರ್ಘಕಾಲ ತಡೆಯೊಡ್ಡಿರುವ ಬಗ್ಗೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ ಕಲ್ಲಿದ್ದಲು ಸಾಗಾಣಿಕೆಗೆ ಪ್ರತಿಭಟನೆಯಿಂದ ತೊಂದರೆಯಾಗಿಲ್ಲ ಎಂದು ರಾಜ್ಯ ಸರ್ಕಾರ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಕಂಪೆನಿ  ವಕ್ತಾರರೊಬ್ಬರು ಹೇಳಿದ್ದಾರೆ.
ಪ್ರತಿನಿತ್ಯ ಸುಮಾರು 2,500 ಕಲ್ಲಿದ್ದಲು ಹೊತ್ತ ಟ್ರಕ್‌ಗಳು ಗಣಿಯಿಂದ ಸಾಗಾಣಿಕೆ ನಡೆಸುತ್ತವೆ. ಇದಕ್ಕೆ ಅಡ್ಡಿಯಾದ ಕುರಿತು ಯಾವುದೇ ವರದಿ ಬಂದಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.