ADVERTISEMENT

ಪ್ರಧಾನಿಯನ್ನು ಭೇಟಿ ಮಾಡಿದ ರಾಹುಲ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:20 IST
Last Updated 17 ಅಕ್ಟೋಬರ್ 2012, 8:20 IST
ಪ್ರಧಾನಿಯನ್ನು ಭೇಟಿ ಮಾಡಿದ ರಾಹುಲ್
ಪ್ರಧಾನಿಯನ್ನು ಭೇಟಿ ಮಾಡಿದ ರಾಹುಲ್   

ನವದೆಹಲಿ (ಪಿಟಿಐ/ಐಎಎನ್ಎಸ್): ಕೇಂದ್ರ ಸಚಿವಸಂಪುಟ ಪುನರ್ ರಚನೆಯ ದಟ್ಟ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಬುಧವಾರ ಪ್ರಧಾನಿ ಮನಮೋಹನಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇತ್ತೀಚೆಗಷ್ಟೆ ತೃಣಮೂಲ ಕಾಂಗ್ರೆಸ್‌ ಯುಪಿಎ ಮೈತ್ರಿಕೂಟ ತೊರೆದದ್ದರಿಂದ ಸಂಪುಟ ದರ್ಜೆ ಸೇರಿದಂತೆ ಕೆಲವು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಮಂತ್ರಿಮಂಡಲವನ್ನು ಪುನರ್ ರಚಿಸುವ ಊಹಾಪೋಹಗಳು ದಟ್ಟವಾಗಿದ್ದು, ಮಂಗಳವಾರವಷ್ಟೆ ಸೋನಿಯಾಗಾಂಧಿ ಹಾಗೂ ಪ್ರಧಾನಿ ಮನಮೋಹನಸಿಂಗ್ ಅವರು ಪ್ರತ್ಯೇಕವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ರಾಹುಲ್ ಗಾಂಧಿ ಅವರು ಪ್ರಧಾನಿ ಅವರೊಂದಿಗೆ ನಡೆಸಿದ ಮಾತುಕತೆಯ ವಿವರಗಳು ತಿಳಿದು ಬಂದಿಲ್ಲ. ಪಕ್ಷದ ಒಳಗೆ ಮಾತ್ರವಲ್ಲ ಸ್ವತ: ಪ್ರಧಾನಿ ಅವರೂ ಸಂಪುಟಕ್ಕೆ ಸೇರುವಂತೆ ರಾಹುಲ್ ಅವರ ಮೇಲೆ ತೀವ್ರವಾದ ಒತ್ತಡ ಹಾಕುತ್ತಿದ್ದು, ಸಂಪುಟಕ್ಕೆ ಸೇರುವರೆ ಎಂಬುದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

ಆದಾಗ್ಯೂ ರಾಹುಲ್ ಅವರು ತಮಗೆ ಪರಮಾಪ್ತರಾದ ಮನಿಕಾ ಟ್ಯಾಗೂರ್ ಹಾಗೂ ಮೀನಾಕ್ಷಿ ನಟರಾಜನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಬಂಧ ಪ್ರಧಾನಿ ಅವರೊಡನೆ ಚರ್ಚೆ ನಡೆಸಿದರೆಂದು ಮೂಲಗಳು ತಿಳಿಸಿವೆ.

ಆದರೆ ಕಾಂಗ್ರೆಸ್ ಪಕ್ಷವು ಇದೊಂದು ಸಾಮಾನ್ಯ ಭೇಟಿ ಅಷ್ಟೆ ಎಂದು ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT