ADVERTISEMENT

ಪ್ರಧಾನಿ ತಪ್ಪು ದಾರಿಗೆ ಎಳೆದಿದ್ದಾರೆ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): 2008ರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸಂಸದರಿಗೆ ಯಾವುದೇ ಬಗೆಯ ಲಂಚ ನೀಡಿರಲಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಸಂಸತ್ತನ್ನು ತಪ್ಪುದಾರಿಗೆ ಎಳೆದಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸದನದ ಹೊರಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತ ತನಿಖೆಗೆ ನೇಮಕೊಂಡಿದ್ದ ಕಿಶೋರ್‌ಚಂದ್ರ ದೇವ್ ನೇತೃತ್ವದ ಸಂಸದೀಯ ಸಮಿತಿಯ ಅಭಿಪ್ರಾಯಕ್ಕೆ ಪ್ರಧಾನಿ ಅವರ ಹೇಳಿಕೆ ವ್ಯತಿರಿಕ್ತವಾಗಿದೆ. ಹಣ ವಿನಿಮಯ ನಡೆದಿದೆ ಎಂದು ಸಮಿತಿ ಹೇಳಿದ್ದರೆ, ಲಂಚ ಕೊಟ್ಟೇ ಇಲ್ಲ ಎಂದು ಪ್ರಧಾನಿ ವಾದಿಸಿದ್ದಾರೆ. ಯುಪಿಎ ಸರ್ಕಾರ ಮತ್ತು ಪ್ರಧಾನಿ ಇಬ್ಬರೂ ಅಕ್ರಮ ಮತದ ಫಲಾನುಭವಿಗಳಾಗಿದ್ದಾರೆ. ಲಂಚ ನೀಡಿಕೆಯ ಬಗ್ಗೆ ತಮಗೆ ಅರಿವಿಲ್ಲ ಎಂದು ಸಿಂಗ್ ಹೇಳುತ್ತಿದ್ದರೂ ಖಂಡಿತವಾಗಿಯೂ ಅವರು ಸಹ ಫಲಾನುಭವಿಯೇ ಆಗಿದ್ದಾರೆ. ಹೀಗಾಗಿ ಕಾನೂನಿನ ಪ್ರಕಾರ ಅವರು ಸಹ ಹೊಣೆಗಾರರು ಎಂದು ಆಪಾದಿಸಿದರು.

ಮೂವರು ಬಿಜೆಪಿ ಸಂಸದರಿಗೆ ಹಣ ನೀಡುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿರುವ ಸಂಜೀವ್ ಸಕ್ಸೇನಾ ಅವರ ಬಗ್ಗೆ ಪ್ರಸ್ತಾಪಿಸಿರುವ ಸಮಿತಿಯು ‘ಶ್ರೀ ಸಕ್ಸೇನಾ ಅವರು ತಿಳಿದೋ ತಿಳಿಯದೆಯೋ ಲಂಚ ನೀಡುತ್ತಿದ್ದಾರೆ’ ಎಂದು ಹೇಳಿರುವುದನ್ನು ಪ್ರಧಾನಿ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಂಡರು. ಹಾಗಿದ್ದರೆ ಸಕ್ಸೇನಾ ಯಾರ ಪರವಾಗಿ ಲಂಚ ನೀಡುತ್ತಿದ್ದರು ಎಂದು ಪ್ರಶ್ನಿಸಿದ ಉಭಯತ್ರರು, ಅವರ ಈ ಪಾತ್ರದ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದರು.

ಶರದ್ ಯಾದವ್, ಯಶವಂತ ಸಿನ್ಹ ಹಾಗೂ ತಾವು, ವಿಕಿಲೀಕ್ಸ್ ಬಹಿರಂಗಗೊಳಿಸಿರುವ ವಿಷಯಗಳ ಬಗ್ಗೆ ಇದೇ 22ರಂದು ಚರ್ಚೆಗೆ ಆಗ್ರಹಿಸಿದ್ದೇವೆ ಎಂದು ಸುಷ್ಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.