ADVERTISEMENT

ಪ್ರಧಾನಿ ಬಳಿ ಪ್ರತಿಭಟನೆ ದಾಖಲಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಪ್ರಧಾನಿ ಬಳಿ ಪ್ರತಿಭಟನೆ ದಾಖಲಿಸಿದ ಮೋದಿ
ಪ್ರಧಾನಿ ಬಳಿ ಪ್ರತಿಭಟನೆ ದಾಖಲಿಸಿದ ಮೋದಿ   

ಅಹಮದಾಬಾದ್ (ಪಿಟಿಐ): ಗುಜರಾತ್‌ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದ ವೇಳೆ ಏರ್ಪಟ್ಟ ಒಡಂಬಡಿಕೆಗಳ ಸಂಬಂಧ ಆದಾಯ ತೆರಿಗೆ ಇಲಾಖೆಯು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿರುವುದಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.

ಜನವರಿಯಲ್ಲಿ ನಡೆದ ಸಮಾವೇಶದ ವೇಳೆ ಏರ್ಪಟ್ಟ ತಿಳಿವಳಿಕೆ ಒಪ್ಪಂದಗಳ (ಎಂಒಯು) ಪೈಕಿ 1000 ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳ ಹೂಡಲು ಮುಂದೆ ಬಂದ ಕಂಪೆನಿಗಳೊಂದಿಗಿನ ಒಪ್ಪಂದಗಳ ಬಗ್ಗೆ ಎಲ್ಲಾ ವಿವರ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್‌ನಲ್ಲಿ ಸೂಚಿಸಿದೆ.

ಇಲ್ಲಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯ (ಐಐಎಂ) ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಆಗಮಿಸಿದ್ದಾರೆ.

ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ ಈ ಇಬ್ಬರ ಭೇಟಿ ನಿಗದಿಯಾಗಿರಲಿಲ್ಲ. ಆದರೆ ನರೇಂದ್ರ ಮೋದಿ ಈ ಸಂದರ್ಭ ಬಳಸಿಕೊಂಡು ಪ್ರಧಾನಿಯವರನ್ನು ಕಂಡು ತಮ್ಮ ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ADVERTISEMENT

ಈ ರೀತಿ ನೋಟಿಸ್ ನೀಡಬಾರದಿತ್ತು ಎಂದು ಅಭಿಪ್ರಾಯಪಟ್ಟ ಪ್ರಧಾನಿ ಮನಮೋಹನ್ ಸಿಂಗ್ ಅವರು, ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.