ADVERTISEMENT

ಪ್ರಧಾನಿ ಸಿಂಗ್ ಆಸ್ತಿ ಐದು ಕೋಟಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ/ ಐಎಎನ್‌ಎಸ್): 1996ರಲ್ಲಿ ಖರೀದಿಸಿದ ಒಂದು ಹಳೆಯ ಮಾರುತಿ 800 ಕಾರು, ಚಂಡೀಗಡ ಮತ್ತು ದೆಹಲಿಯ ವಂಸತ ಕುಂಜ್‌ನಲ್ಲಿ ಸ್ವಂತ ಮನೆ, 150 ಗ್ರಾಂ ಚಿನ್ನಾಭರಣ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 3.22 ಕೋಟಿ ರೂಪಾಯಿ ಠೇವಣಿ... ಎಲ್ಲ ಸೇರಿದರೂ ಐದು ಕೋಟಿ ರೂಪಾಯಿ ಮೀರದ ಆಸ್ತಿ!

ಎರಡನೆಯ ಅವಧಿಗೆ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಒಟ್ಟಾರೆ ಆಸ್ತಿ ಮೌಲ್ಯ ಇದು. ಮೂರು ಪುಟಗಳ ವೈಯಕ್ತಿಕ ಆಸ್ತಿಯ ವಿವರವನ್ನು ವೆಬ್‌ಸೈಟ್‌ನಲ್ಲಿ ಶನಿವಾರ ಅವರು ಘೋಷಿಸಿದ್ದಾರೆ. 41 ವರ್ಷಕ್ಕೂ ಹೆಚ್ಚು ಕಾಲದಿಂದ ಸಾರ್ವಜನಿಕ ಸೇವೆಯಲ್ಲಿರುವ ಸಿಂಗ್, ಆ ಪೈಕಿ 20 ವರ್ಷ ಸಂಸತ್‌ನ ವಿವಿಧ ಪ್ರಭಾವಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಮನೆ, ಬ್ಯಾಂಕ್ ಠೇವಣಿ, ಚಿನ್ನಾಭರಣ, ವಾಹನ ಎಲ್ಲ ಸೇರಿ ಅವರ ಒಟ್ಟು ಆಸ್ತಿಯ ಮೌಲ್ಯ 5.1 ಕೋಟಿ ರೂಪಾಯಿ. ಅವರು ಕೃಷಿ ಅಥವಾ ಕೃಷಿಯೇತರ ಭೂಮಿಯನ್ನು ಹೊಂದಿಲ್ಲ.

ಕಚೇರಿ ಕೆಲಸಕ್ಕೆ ಬಿಎಂಡಬ್ಲ್ಯು ಕಾರು ಬಳಸುವ ಪ್ರಧಾನಿಗೆ ಸ್ವಂತಕ್ಕೆ ಹಳೆಯ ಮಾರುತಿ 800 ಕಾರು ಬಿಟ್ಟರೆ ಬೇರೆ ಗತಿಯಿಲ್ಲ. ಅವರ ಗ್ಯಾರೇಜುಗಳಲ್ಲಿ ಯಾವುದೇ ಅತ್ಯಾಧುನಿಕ ಕಾರುಗಳಿಲ್ಲ. 

ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿದ ಹರಿಕಾರನಿಗೆ ಷೇರು, ಸ್ಟಾಕ್‌ಗಳಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಇಲ್ಲ. ಮೂರು ಕೋಟಿ ರೂಪಾಯಿ ಹಣವನ್ನು ಅವರು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿದ್ದಾರೆ. ಪ್ರಧಾನಿಗೆ ಚಿನ್ನದ ಮೇಲೂ ವ್ಯಾಮೋಹ ಕಡಿಮೆ. ಅವರ ಬಳಿ ಇರುವುದು ಕೇವಲ ರೂ 2.75 ಲಕ್ಷ ಮೌಲ್ಯದ 150.8 ಗ್ರಾಂ ಚಿನ್ನಾಭರಣ ಮಾತ್ರ!



ಸದ್ಯದ ಮಾರುಕಟ್ಟೆಯಲ್ಲಿ ರೂ90 ಲಕ್ಷ ಬೆಲೆ ಬಾಳುವ ಚಂಡೀಗಡದ ಮನೆ, ದೆಹಲಿಯ ಪ್ರತಿಷ್ಠಿತ ವಸಂತ್ ಕುಂಜ್ ಪ್ರದೇಶದಲ್ಲಿ ರೂ 88.67 ಲಕ್ಷ ಮೌಲ್ಯದ ಫ್ಲ್ಯಾಟ್ ಹೊಂದಿದ್ದಾರೆ. ಅವರ ಖಾತೆಯಲ್ಲಿ ರೂ 3.22 ಕೋಟಿ ಠೇವಣಿ, ಪತ್ನಿ ಗುರುಶರಣ್ ಕೌರ್ ಅವರ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ರೂ11 ಲಕ್ಷ ಇದೆ.  

ಸಚಿವ ಸಂಪುಟದ 77 ಸಚಿವರ ಪೈಕಿ ವಿಲಾಸರಾವ್ ದೇಶಮುಖ್, ಕೃಷ್ಣಾ ತೀರತ್, ಜಯಂತಿ ನಟರಾಜನ್, ಜಿತೇಂದ್ರ ಸಿಂಗ್ ಮತ್ತು ಎಸ್.ಜಗತ್ ರಕ್ಷಕನ್ ಅವರ ಆಸ್ತಿ ವಿವರ ಪ್ರಧಾನಿ ಕಚೇರಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಸಚಿವರ ನೀತಿಸಂಹಿತೆ ಅಡಿ ಪ್ರಧಾನಿ ಆದಿಯಾಗಿ ಬಹುತೇಕ ಸಚಿವರು ಶನಿವಾರ ಆಸ್ತಿ ಘೋಷಿಸಿಕೊಂಡಿದ್ದಾರೆ. 32 ಸಂಪುಟ ದರ್ಜೆ ಸಚಿವರು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಏಳು ರಾಜ್ಯ ಸಚಿವರು, 37 ರಾಜ್ಯ ಸಚಿವರು ಇವರಲ್ಲಿ ಸೇರಿದ್ದಾರೆ.

ಸಚಿವರ ಬಂಡವಾಳ
ಕಮಲ್ ಶ್ರೀಮಂತ- ಆಂಟನಿ ಬಡವ 

ಮೊಯಿಲಿ ಕೈ ಖಾಲಿ

ಚಿದಂಬರಂಗೆ ಕೊಡಗಿನಲ್ಲಿ ಕಾಫಿ ತೋಟ

ಅಳಗಿರಿ, ಸಿಬಲ್ ಕೂಡ ಶ್ರೀಮಂತರು

ಆಂಟನಿಗೆ ಸ್ವಂತ ವಾಹನವಿಲ್ಲ

www.pmindia.nic.in ವೆಬ್‌ಸೈಟ್‌ನಲ್ಲಿ ಆಸ್ತಿ ವಿವರ ಲಭ್ಯ
 



ಕಮಲ್ ಶ್ರೀಮಂತ- ಆಂಟನಿ ಬಡವ:ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಭಾರಿ ಕುಳ. 35 ಪುಟಗಳ ಆಸ್ತಿ ಘೋಷಣೆಯ ಪ್ರಕಾರ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ ರೂ 250 ಕೋಟಿ  ಸರಳತೆಯಿಂದ ಗಮನ ಸೆಳೆದಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ ಹಾಗೂ ಅವರ ಪತ್ನಿಯ ಆಸ್ತಿ ಅರ್ಧ ಕೋಟಿಯನ್ನೂ ಮೀರುವುದಿಲ್ಲ. ಅವರ ಹೆಸರಿನಲ್ಲಿ ಕೇವಲ ರೂ 39.15 ಲಕ್ಷ ಮೌಲ್ಯದ ಆಸ್ತಿ ಇದೆ. ಆಂಟನಿ ಬಳಿ ಯಾವುದೇ ವಾಹನ, ಸ್ವಂತ ಮನೆ, ಆಸ್ತಿ ಇಲ್ಲ. ಉಳಿತಾಯ ಖಾತೆಯಲ್ಲಿರುವುದು ಕೇವಲ ರೂ 1.82 ಲಕ್ಷ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ಎಂ.ಕರುಣಾನಿಧಿ ಅವರ ಪುತ್ರ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಸಚಿವ ಎಂ.ಕೆ.ಅಳಗಿರಿ ಅವರು ಕಮಲ್‌ನಾಥ್ ನಂತರದ ಭಾರಿ ಕುಳಗಳು. ಅವರ ತಲಾ ಆಸ್ತಿಯ ಒಟ್ಟು ಮೌಲ್ಯ ರೂ30 ಕೋಟಿ

ಮೊಯಿಲಿ ಕೈ ಖಾಲಿ!: ಕರ್ನಾಟಕವನ್ನು ಪ್ರತಿನಿಧಿಸುವ ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಸಂಸದ ಎಂ.ವೀರಪ್ಪ ಮೊಯಿಲಿ ಕೈಯಲ್ಲಿ ಹಣವೇ ಇಲ್ಲವಂತೆ! ಅವರ ಬಳಿ ಯಾವುದೇ ಚರಾಸ್ತಿಯೂ ಇಲ್ಲ. ಖಾತೆಯಲ್ಲಿ ಇರುವುದು ರೂ 13.33 ಲಕ್ಷ.

ಇನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು         ರೂ 1.76 ಕೋಟಿ ಆಸ್ತಿಯ ಒಡೆಯ. ಅದರಲ್ಲಿ  56.16 ಲಕ್ಷ ರೂಪಾಯಿ ಸ್ಥಿರಾಸ್ತಿ ಪಾಲು. ಅವರ ಪತ್ನಿಯ ಹೆಸರಿನಲ್ಲಿ 1.10 ಕೋಟಿ ರೂಪಾಯಿ ಆಸ್ತಿ ಇದೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ ರೂ 1.25 ಕೋಟಿ ಮತ್ತು ಶರದ್ ಪವಾರ್ ರೂ 12 ಕೋಟಿ ಆಸ್ತಿಯ ಒಡೆಯರು. ಪ್ರಣವ್‌ಗೆ ಓಡಾಡಲು ಫೋರ್ಡ್ ಐಕಾನ್ ಕಾರಿದೆ. ಕೋಲ್ಕತ್ತ ಮತ್ತು ದೆಹಲಿಯಲ್ಲಿ ಫ್ಯ್ಲಾಟ್‌ಗಳಿವೆ. 

ಗೃಹ ಸಚಿವ ಪಿ.ಚಿದಂಬರಂ ಮತ್ತು ಪತ್ನಿ ನಳಿನಿ ಜಂಟಿಯಾಗಿ ರೂ 23.67 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದರಲ್ಲಿ ಚಿದಂಬರಂ ಅವರಿಗೆ ಸೇರಿದ ಆಸ್ತಿಯ ಮೌಲ್ಯ ರೂ 11.14 ಕೋಟಿ . ವಿವಿಧ ಬ್ಯಾಂಕ್ ಖಾತೆಗಳಲ್ಲಿ ರೂ1.29 ಕೋಟಿ ಠೇವಣಿ ಇದೆ. ಕರ್ನಾಟಕದ ಕೊಡಗಿನಲ್ಲಿ ಕಾಫಿ  ತೋಟ (ರೂ28.26 ಲಕ್ಷ), ಸ್ಕೋಡಾ,  ಫೋಕ್ಸ್‌ವ್ಯಾಗನ್ ಕಾರುಗಳು, ಕೈನೆಟಿಕ್ ಹೋಂಡ ಮತ್ತು ರೂ 1,239 ಮೌಲ್ಯದ ಸೈಕಲ್ ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಬಳಿ 65,955 ರೂಪಾಯಿ ಮೌಲ್ಯದ ಚಿನ್ನಾಭರಣ ಇದೆ.ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ರೂ7.75 ಕೋಟಿ  ಆಸ್ತಿಯ ಒಡೆಯ. ಅವರ ಪತ್ನಿಯ ಹೆಸರಿನಲ್ಲಿ ರೂ 4.5 ಕೋಟಿ ಮೌಲ್ಯದ ಆಸ್ತಿ ಇದೆ. 

ಸಂಸತ್ ಅಧಿವೇಶನದಲ್ಲಿ ಭ್ರಷ್ಟಾಚಾರ ಕುರಿತು ಮಾತನಾಡಿದ್ದ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರು, ಪ್ರಧಾನಿ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಧಾಟಿಯಲ್ಲಿ ಮಾತನಾಡಿದ್ದರು. ಇದು ಸಿಂಗ್ ಅವರ ಮನನೋಯಿಸಿತ್ತು. ಅವರ ವ್ಯಕ್ತಿಗತ ಟೀಕೆಗೆ ತಮ್ಮ ಹಾಗೂ ಸಹೋದ್ಯೋಗಿ ಸಚಿವರ ಆಸ್ತಿ ಘೋಷಣೆಯ ಮೂಲಕ ಅವರು ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.