ADVERTISEMENT

ಪ್ರಧಾನಿ ಹುದ್ದೆಯ ಆಸೆ ನನಗಿಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ವಾರಣಾಸಿ (ಪಿಟಿಐ): ಪ್ರಧಾನಿ ಹುದ್ದೆಯ ಆಸೆ ನನಗಿಲ್ಲ ಎಂದಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಬದಲಾಯಿಸುವ ಮಹದಾಸೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ವಾರಣಾಸಿಗೆ ಆಗಮಿಸಿದ್ದ ರಾಹುಲ್ ಅಪರೂಪಕ್ಕೆಂಬಂತೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

ಪ್ರಧಾನಿಯಾಗುವ ಅರ್ಹತೆ ರಾಹುಲ್‌ಗಿದೆ. ಆ ಸ್ಥಾನಕ್ಕೆ ಅವರು ಸೂಕ್ತವಾಗಿದ್ದಾರೆ ಎಂದು ಸಹೋದರಿ ಪ್ರಿಯಾಂಕಾ ಭಾನುವಾರಷ್ಟೇ ನೀಡಿದ್ದ ಹೇಳಿಕೆಯ ಕುರಿತು ಪ್ರಶ್ನಿಸಿದಾಗ, `ದೇಶದ ಬಹುತೇಕ ರಾಜಕೀಯ ನಾಯಕರಿಗೆ ಪ್ರಧಾನಿ ಹುದ್ದೆಯ ಕುರಿತು ಮೋಹವಿದೆ. ಆದರೆ, ರಾಹುಲ್ ಗಾಂಧಿಗೆ ಆ ಮೋಹವಿಲ್ಲ. ನನ್ನ ಗೀಳು ಬೇರೆಯದ್ದು~ ಎಂದು ಉತ್ತರಿಸಿದರು.

`ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಪರಿವರ್ತಿಸುವ ಗುರಿ ನನ್ನದು. ಕಳೆದ 22 ವರ್ಷಗಳಿಂದ ಈ ರಾಜ್ಯವನ್ನು ಆಳಿರುವ ಪಕ್ಷಗಳು ಇಲ್ಲಿನ ಜನರನ್ನು ಮೂರ್ಖರನ್ನಾಗಿಸಿವೆ. ಇಲ್ಲಿ ನಾವು ಕೆಲಸ ಮಾಡುತ್ತಿರುವ ರೀತಿಯನ್ನು ಬದಲಾಯಿಸಬೇಕಿದೆ. ಜನರ ಭಾವನೆಗಳಿಗೆ ಕಿವಿಗೊಡದಿರುವುದು ಬೃಹತ್ ಅಪರಾಧ. ನಾನು ದೊಡ್ಡ ಶಕ್ತಿ ಹೊಂದಿಲ್ಲ. ಆದರೆ, ಈ ದೇಶದ ಕೆಲ ಜನ ನನ್ನಲ್ಲಿ ನಂಬಿಕೆ ಇಟ್ಟಿದ್ದಾರೆ. ಉತ್ತರ ಪ್ರದೇಶದ ಶೇ 1ರಷ್ಟು ಮಂದಿ ನಮ್ಮಲ್ಲಿ ನಂಬಿಕೆ ಇಟ್ಟರೂ ಅಷ್ಟೇ ಸಾಕು~ ಎಂದು ರಾಹುಲ್ ಹೇಳಿದರು.

ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರತ್ತ ಟೀಕಾಸ್ತ್ರ ಎಸೆದ ರಾಹುಲ್, ಕರ್ನಾಟಕ ಸೇರಿದಂತೆ ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿನ ಭ್ರಷ್ಟಾಚಾರಕ್ಕೆ ಅಡ್ವಾಣಿ ಕುರುಡಾಗಿದ್ದಾರೆ. ಎಲ್ಲೇ ಭ್ರಷ್ಟಾಚಾರದ ಸುದ್ದಿ ಕೇಳಿಬಂದರೂ ಕಾಂಗ್ರೆಸ್ ಪಕ್ಷ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ. ನಾವು ಇದೇ ಕಾರಣಕ್ಕಾಗಿ ನಮ್ಮ ಸಚಿವರುಗಳನ್ನು ಜೈಲಿಗೆ ಅಟ್ಟಿದ್ದೇವೆ ಎಂದು ಹೇಳಿಕೊಂಡರು.

ಲೋಕಾಯುಕ್ತರ ನೇಮಕವನ್ನು ವಿರೋಧಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಪಾಲಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು ಎಂದು ನಾನು ಪ್ರಸ್ತಾಪಿಸಿದಾಗ ವಿರೋಧ ಪಕ್ಷಗಳ ನಾಯಕರು ಅದು ರಾಹುಲ್ ಪರಿಕಲ್ಪನೆ ಎಂದು ನಕ್ಕುಬಿಟ್ಟರು. ಅದು ದೇಶದ ಪರಿಕಲ್ಪನೆಯಾಗಿತ್ತು. ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ `ಸೌಂದರ್ಯ~ ಅಡಗಿದೆ. ಅದೇ ಮಾದರಿಯಲ್ಲಿ ಸ್ವತಂತ್ರ ಲೋಕಪಾಲ ಸಂಸ್ಥೆಯನ್ನೂ ರೂಪಿಸಬೇಕಿದೆ. ಲೋಕಪಾಲ ಮಸೂದೆ ಅಂಗೀಕಾರಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂದು ನೀವು ಅವರನ್ನು ಪ್ರಶ್ನಿಸಿ~ ಎಂದರು.

ವಿದೇಶಿ ಬ್ಯಾಂಕ್‌ಗಳಲ್ಲಿ ಇರುವ ಕಪ್ಪು ಹಣ ತರುವಂತೆ ಯೋಗ ಗುರು ಬಾಬಾ ರಾಮದೇವ್ ಒತ್ತಾಯಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಅವರು ಕಪ್ಪುಬಾವುಟ ಹಿಡಿದ ಐದಾರು ಬೆಂಬಲಿಗರನ್ನು ಕಳುಹಿಸುತ್ತಾರೆ. ನಾನು ಹೆದರಿ ಓಡಿಹೋಗುವೆ ಎಂದು ತಿಳಿದಂತಿದೆ ಎಂದು ವ್ಯಂಗ್ಯವಾಡಿದರು.

ಉತ್ತರ ಪ್ರದೇಶದ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಲ್ಲಿ ಕಾಂಗ್ರೆಸ್ ಯಾವ ಕಾರ್ಯತಂತ್ರ ಅನುಸರಿಸಲಿದೆ ಎಂಬ ಪ್ರಶ್ನೆಗೆ, ನಾವು ಯಾವ ಪಕ್ಷದೊಂದಿಗೂ ಕೈಜೋಡಿಸುವುದಿಲ್ಲ. ನಾವು ಬದಲಾವಣೆಗಾಗಿ ಬಂದಿದ್ದೇವೆ. ಬಡವರು ಹಾಗೂ ಜನಸಾಮಾನ್ಯರ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

`ಮಾಯಾವತಿ ಹಾಗೂ ಮುಲಾಯಂ ಸಿಂಗ್ ಇಬ್ಬರೂ ಜನರಿಂದ ದೂರ ಸರಿದಿದ್ದಾರೆ. ಯಾವುದಾದರೂ ರಾಜ್ಯ ಹಿಂದಕ್ಕೆ ಬಿದ್ದಿದೆ ಎಂದರೆ ಜನರ ಬಲವನ್ನು ಅಲ್ಲಿ ಬಳಸಿಕೊಂಡಿಲ್ಲ ಎಂದೇ ಅರ್ಥ. ಕಳೆದ 22 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಶೇ 10ರಷ್ಟು ಜನರಿಗಾಗಿ ಮಾತ್ರ ಕೆಲಸ ಮಾಡಿವೆ. ಗೂಂಡಾಗಳು ಮತ್ತು ಕಳ್ಳರು ಒಬ್ಬರಾದ ಮೇಲೆ ಒಬ್ಬರು ಅಧಿಕಾರಕ್ಕೆ ಬಂದಿದ್ದಾರೆ.~

`ಕಾಂಗ್ರೆಸ್ ಭವಿಷ್ಯ ಇಲ್ಲಿ ಉತ್ತಮವಾಗಿದೆ. ನಮ್ಮ ಪಕ್ಷಕ್ಕೆ 200 ಸ್ಥಾನ ಬರಲಿ, 400 ಸ್ಥಾನ ಬರಲಿ ಅಥವಾ 2 ಸ್ಥಾನ ಬರಲಿ. ರೈತರು, ಕಾರ್ಮಿಕರು, ಜನಸಾಮಾನ್ಯರು ನ್ಯಾಯ ಪಡೆಯದ ಹೊರತೂ ನನ್ನ ಕೆಲಸ ಪೂರ್ಣವಾಗುವುದಿಲ್ಲ~ ಎಂದು ಈ ಯುವ ನಾಯಕ ಹೇಳಿದರು.

ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರನ್ನು ಬಡಗಿಯ ಮಗ ಎಂದು ಬಿಂಬಿಸುತ್ತಿರುವ ಕುರಿತು ಪ್ರಶ್ನಿಸಿದಾಗ, `ಉತ್ತರ ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಇದೆ ಎಂಬುದು ಗೊತ್ತು. ದುರ್ಬಲ ವರ್ಗದಿಂದ ಬಂದವರೂ ಸಾಧನೆ ಮಾಡಬಹುದು ಎಂಬುದಕ್ಕೆ ಅವರು ನಿದರ್ಶನವಾಗಿ ನಿಲ್ಲುತ್ತಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.