ನವದೆಹಲಿ (ಪಿಟಿಐ): ತನಿಖೆ ಹಾಗೂ ವಿಚಾರಣೆಯಲ್ಲಿನ ವಿಳಂಬವನ್ನು ತಡೆಯಲು ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ `ವಿಶೇಷ ಗಮನ~ ಹರಿಸಬೇಕಾಗುತ್ತದೆ; ಆದರೆ ಇಂಥ ಪ್ರಕರಣಗಳಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ವಿಶೇಷ ನ್ಯಾಯಾಲಯಗಳನ್ನು ರಚಿಸುವ ನಿರ್ದೇಶನ ನೀಡುವಂತಿಲ್ಲ ಎಂದು ಕಾನೂನು ಆಯೋಗ ಹೇಳಿದೆ.
ಸಂಕೀರ್ಣ ಕಾನೂನು ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿರುವ ಆಯೋಗವು, `ಚುನಾಯಿತ ಪ್ರತಿನಿಧಿಗಳು ಯಾವುದೇ ಅಪರಾಧ ಎಸಗದೇ ಪರಿಶುದ್ಧವಾಗಿರಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಹಾಗೆಯೇ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರರಕಣಗಳು ತ್ವರಿತವಾಗಿ ಇತ್ಯರ್ಥವಾಗಬೇಕು ಎಂದೂ ಬಯಸುತ್ತಾರೆ~ ಎಂದು ಹೇಳಿದೆ.
ಪ್ರಭಾವಿ ವ್ಯಕ್ತಿಗಳ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸುತ್ತಾ, `ತುರ್ತು ಸಂದರ್ಭಗಳಲ್ಲಿ ಮಾತ್ರ ವಿಶೇಷ ಕೋರ್ಟ್ ರಚಿಸಬಹುದು. ಆದರೆ ಇಂಥ ಎಲ್ಲ ಪ್ರಕರಣಗಳಿಗೂ ಇದು ಅನ್ವಯವಾಗಬಾರದು~ ಎಂದು ಆಯೋಗವು `ಪ್ರಭಾವಿ ವ್ಯಕ್ತಿಗಳ ವಿರುದ್ಧದ ಅಪರಾಧ ಪ್ರಕರಣಗಳ ತ್ವರಿತ ತನಿಖೆ ಹಾಗೂ ವಿಚಾರಣೆ~ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
`ಸಂಸದರು, ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯರು, ಹಾಲಿ-ಮಾಜಿ ಸಚಿವರು, ಮೇಯರ್‌ಗಳು, ಪಾಲಿಕೆ/ ಪರಿಷತ್ ಅಧ್ಯಕ್ಷರು, ರಾಜ್ಯ ಮಟ್ಟದ ಸಾರ್ವಜನಿಕ ಮಂಡಳಿಗಳಿಗೆ ಆಯ್ಕೆಯಾದ ಅಥವಾ ನಿಯೋಜಿತ ಅಧ್ಯಕ್ಷರು, ರಾಜ್ಯ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಪ್ರಮುಖ ಪದಾಧಿಕಾರಿಗಳನ್ನು `ಸಾರ್ವಜನಿಕ ಜೀವನದಲ್ಲಿ ಪ್ರಭಾವಿ ವ್ಯಕ್ತಿಗಳು~ ಎಂದು ಪರಿಗಣಿಸಬಹುದು. ವಿಚಾರಣಾರ್ಹ ಅಪರಾಧಗಳಲ್ಲಿ ಭಾಗಿಯಾದ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಬೇಕು~ ಎಂದೂ ಆಯೋಗವು ಸಲಹೆ ನೀಡಿದೆ.
ಪ್ರಭಾವಿ ವ್ಯಕ್ತಿಗಳ ಕುರಿತ ಪ್ರಕರಣಗಳ ತನಿಖೆ ಚುರುಕಾಗಿ ಮಾಡಬೇಕು. ಅಲ್ಲದೇ ಸಾಧ್ಯವಾದಷ್ಟೂ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಆದರೆ ಯಾವುದೇ ಕಾರಣಕ್ಕೂ ಇದು 6 ತಿಂಗಳನ್ನು ಮೀರಬಾರದು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.