ADVERTISEMENT

ಪ್ರಶ್ನೆ ಪತ್ರಿಕೆ ಬಹಿರಂಗ: ಐವರ ಸೆರೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನವದೆಹಲಿ (ಪಿಟಿಐ): ಬ್ಲ್ಯೂಟೂಥ್ ತಂತ್ರಜ್ಞಾನ ಬಳಸಿ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಒಬ್ಬ ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿ ಸೇರಿ ಐವರನ್ನು ಸೋಮವಾರ ಬಂಧಿಸಿದ್ದಾರೆ.

ಈ ಕೃತ್ಯದ ಸೂತ್ರಧಾರ ಎನ್ನಲಾದ ಉಜ್ಜಯನಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ  ವಿದ್ಯಾರ್ಥಿ ಮೊಹಿತ್ ಚೌಧರಿ (23) ಯನ್ನು ಪ್ರಗತಿ ಮೈದಾನದಲ್ಲಿ ಬಂಧಿಸಲಾಗಿದೆ.

ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಡಾ. ಅಮಿತ್ ಪುನಿಯಾ (23), ಕಪಿಲ್ ಕುಮಾರ (27), ಕೃಷ್ಣ ಪ್ರತಾಪ ಸಿಂಗ್ (27) ಮತ್ತು ಭೀಷ್ಮಸಿಂಗ್ ಅವರನ್ನು ಬಂಧಿಸಲಾಗಿದೆ.

ಇ ಮೇಲ್‌ನಲ್ಲಿ ಉನ್ನತ ತಂತ್ರಜ್ಞಾನದ ಮೊಬೈಲ್ ಮೂಲಕ 23 ಪುಟಗಳ ಪ್ರಶ್ನೆ ಪತ್ರಿಕೆಗಳ ಛಾಯಾ ಚಿತ್ರಗಳನ್ನು ಪಡೆದು ಅವುಗಳನ್ನು ಚೌಧರಿ ಅವರಿಗೆ ರವಾನಿಸಿರುವುದು ತನಿಖೆಯಿಂದ ಗೊತ್ತಾಯಿತು ಎಂದು ಅಪರಾಧ ವಿಭಾಗದ ಡಿಸಿಪಿ ಅಶೋಕ ಚಂದ್ ಸುದ್ದಿಗಾರರಿಗೆ ತಿಳಿಸಿದರು.

ಇಮೇಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಚಿತ್ರಗಳನ್ನು ರವಾನಿಸಲು ಈ ಅತ್ಯಾಧುನಿಕ ಸಾಫ್ಟ್‌ವೇರ್‌ಗೆ ರೂ 25-35 ಲಕ್ಷ  ಪಡೆಯಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ  ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕಾಗಿ ಶೇ 50ರಷ್ಟು ಸ್ಥಾನಗಳನ್ನು ಭರ್ತಿ ಮಾಡಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ದೇಶಾದ್ಯಂತ 156 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಪರೀಕ್ಷೆ ಆರಂಭವಾಗುವ 30 ನಿಮಿಷಕ್ಕೆ ಮೊದಲೇ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿತ್ತು ಎಂದು ಅಶೋಕ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.