ಪಟ್ನಾ (ಪಿಟಿಐ): ಸರನ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ಮಕ್ಕಳು ಸಾವನ್ನಪ್ಪಿದ ದುರಂತಕ್ಕೆ ಶಾಲೆಯ ಪ್ರಾಂಶುಪಾಲರಾದ ಮೀನಾ ದೇವಿ ಅವರ ಕರ್ತವ್ಯಲೋಪವೇ ಕಾರಣ ಉನ್ನತ ಮಟ್ಟದ ತನಿಖಾ ತಂಡವು ಆರೋಪಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಪ್ರಕರಣದ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿದ್ದರು.
`ಪ್ರಾಂಶುಪಾಲರು ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ' ಎಂದು ತನಿಖಾ ತಂಡದ ಮೂಲಗಳು ಹೇಳಿವೆ.
ಗೋವಾ: ವಿದ್ಯಾರ್ಥಿಗಳು ಅಸ್ವಸ್ಥ
ಪಣಜಿ (ಪಿಟಿಐ): ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಗೋವಾದ ಉಸ್‌ಗಾಂವ್ ಎಂಬ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಸೇಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದ್ದು, ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಪಾಂಡಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
`ಕಲಬೆರಕೆ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ದೃಢಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿದ್ದು, ವರದಿ ಬಂದ ನಂತರ ಹೆಚ್ಚಿನ ವಿವರ ಗೊತ್ತಾ ಞಗಲಿದೆ' ಎಂದು ಶಿಕ್ಷಣ ಇಲಾಖೆಯ ನಿರ್ದೇಶಕ ಅನಿಲ್ ಪವಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಚಿವೆ ತಪಾಸಣೆ
ಚೆನ್ನೈ (ಪಿಟಿಐ): ಬಿಸಿಯೂಟ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆಯ ಬಳಿಕ, ಚೆನ್ನೈ ಹಾಗೂ ತಿರುವಳ್ಳೂರು ಪಟ್ಟಣದ ಬಿಸಿಯೂಟ ಕೇಂದ್ರಗಳಿಗೆ ಸಮಾಜ ಕಲ್ಯಾಣ ಸಚಿವೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸಚಿವೆ ಅಂಗನವಾಡಿಯ ಬಿಸಿಯೂಟ ಕೇಂದ್ರವೊಂದಕ್ಕೆ ಭೇಟಿ ನೀಡಿದಾಗ ಅದು ಇನ್ನೂ ಆರಂಭವಾಗಿರಲಿಲ್ಲ. ಈ ಸಂಬಂಧ ಮೂವರನ್ನು ಅಮಾನತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.