ADVERTISEMENT

ಪ್ರಾಮಾಣಿಕರಾದರೆ ಪ್ರಧಾನಿ ತನಿಖೆ ನಡೆಸಲಿ - ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 30 ಮೇ 2012, 9:15 IST
Last Updated 30 ಮೇ 2012, 9:15 IST

ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅಣ್ಣಾ ತಂಡದ ಆರೋಪವನ್ನು ನಂಬುವುದು `ಬಹಳ ಕಷ್ಟ~, ಒಂದು ವೇಳೆ ಪ್ರಧಾನಿ ಅವರು ಪ್ರಾಮಾಣಿಕರಾಗಿದ್ದರೆ ಈ ಕುರಿತು ತನಿಖೆ ನಡೆಸಲಿ ಎಂದು ನಿವೃತ್ತ ನ್ಯಾಯಮೂರ್ತಿ ಮತ್ತು ತಂಡದ ಹಿರಿಯ ಸದಸ್ಯ ಸಂತೋಷ್ ಹೆಗ್ಡೆ ಬುಧವಾರ ಹೇಳಿದರು.

~ಸಿಎಜಿ ವರದಿ ಒಳಗೊಂಡಂತೆ  ಕಲ್ಲಿದ್ದಲು ಸಚಿವಾಲಯದ ಸಲಹೆಗೆ ವಿರುದ್ಧವಾಗಿ ಹರಾಜು ನಡೆಸದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿರುವ ಕುರಿತಂತೆ ತಮ್ಮ ಬಳಿ ದಾಖಲೆಗಳು ಇರುವುದಾಗಿ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ~ ಎಂದ ಹೆಗ್ಡೆ  ಅವರು ~ಪ್ರಧಾನಿ ಅವರನ್ನು ಇವರೆಗೆ ನೋಡಿದಂತೆ ಈ ಆರೋಪಗಳನ್ನು ನಂಬುವುದು ನನಗೆ ತುಂಬಾ ಕಷ್ಟ. ಒಂದು ವೇಳೆ ಆರೋಪಗಳ ಕುರಿತಂತೆ ದಾಖಲೆಗಳಿದ್ದರೆ ತನಿಖೆ ನಡೆಸಲೇಬೇಕು~ ಎಂದು ತಿಳಿಸಿದರು.

ಇದೆ ವೇಳೆ ಅವರು ಅಣ್ಣಾ ತಂಡವು ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ತನಿಖೆಗಾಗಿ ಪ್ರಧಾನಿಯವರಿಗೆ ಕಳುಹಿಸಿರುವುದು ನನಗೆ ಕಂಡು ಬಂದಿಲ್ಲ ಎಂದು ಹೇಳಿದರು.
 
ಒಂದು ವೇಳೆ ಪ್ರಧಾನಿ ಅವರು ಪ್ರಾಮಾಣಿಕರಾಗಿದ್ದರೆ ಆರೋಪಗಳ ಕುರಿತಂತೆ ತನಿಖೆ ನಡೆಸುವ ಮೂಲಕ ಆರೋಪದಿಂದ ಮುಕ್ತರಾಗಬೇಕು. ಇದೊಂದು ಅವರಿಗೆ ನಿರಪರಾಧಿ ಎಂದು ಸಾಬೀತು ಪಡಿಸಲು ಉಳಿದಿರುವ ಕಾನೂನು ಬದ್ದವಾದ ದಾರಿ. ಏಕೆಂದರೆ ಅನುಮಾನಗಳಿರುವುದು ಅಣ್ಣಾತಂಡದಲ್ಲಿ  ಅಲ್ಲ ಅದು ಇರುವುದು ಸಿಎಜಿ ವರದಿಯಲ್ಲಿ ಎಂದು ಹೇಳಿದರು.

ಆರೋಪ ಕುರಿತಂತೆ ಮಂಗಳವಾರ ಪ್ರತಿಕ್ರಿಯಿಸಿದ ಪ್ರಧಾನಿ ಅವರು ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ತಾವು ಅವ್ಯವಹಾರ ಎಸಗಿರುವುದು ರುಜುವಾತು ಆದ್ದಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.