ADVERTISEMENT

ಫೊರ್ಟೀಸ್‌ ಉಪಾಧ್ಯಕ್ಷ ಶಿವಿಂದರ್‌ ‘ಸತ್ಸಂಗಿ’

ಆಧ್ಯಾತ್ಮಿಕ ಸೆಳೆತ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2015, 19:30 IST
Last Updated 23 ಸೆಪ್ಟೆಂಬರ್ 2015, 19:30 IST

ನವದೆಹಲಿ (ಪಿಟಿಐ): ಆಧ್ಯಾತ್ಮಿಕ ಸೆಳೆತದಿಂದಾಗಿ ಫೊರ್ಟೀಸ್‌ ಆಸ್ಪತ್ರೆ ಸಮೂಹದ ಸಂಸ್ಥಾಪಕ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿವಿಂದರ್‌ ಮೋಹನ್‌ ಸಿಂಗ್‌ (40) ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಆಧ್ಯಾತ್ಮಿಕ ಪಂಥವಾದ ರಾಧಾ ಸ್ವಾಮಿ ಸತ್ಸಂಗದಲ್ಲಿ ಸೇವೆ ಸಲ್ಲಿಸಲು ಶಿವಿಂದರ್‌ ಈ ನಿರ್ಧಾರ ಕೈಗೊಂಡಿದ್ದಾರೆ.

ಅವರು 2016 ಜನವರಿ 1 ರಿಂದ ಅಮೃತಸರ ಬಳಿಯ ಬಿಯಾಸ್‌ನಲ್ಲಿರುವ ರಾಧಾ ಸ್ವಾಮಿ ಸತ್ಸಂಗದ ಪ್ರಧಾನ ಕೇಂದ್ರದಲ್ಲಿ ಸೇವಕರಾಗಿ ಕೆಲಸ ಮಾಡಲಿದ್ದಾರೆ. ಶಿವಿಂದರ್‌ ಮೋಹನ್‌ ಸಿಂಗ್‌ ಉಪಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿದರೂ ಕಂಪೆನಿಯ ನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದಿಲ್ಲ ಎಂದು ಫೊರ್ಟೀಸ್‌ ಹೆಲ್ತ್‌ಕೇರ್‌ ಪ್ರಕಟಣೆ ತಿಳಿಸಿದೆ.

ಶಿವಿಂದರ್‌  ಅವರು ಅಣ್ಣ ಮಾಲ್ವಿಂದರ್‌ ಮೋಹನ್‌ ಸಿಂಗ್‌ ಜತೆ ಸೇರಿ 90ರ ದಶಕದಲ್ಲಿ  ಫೊರ್ಟೀಸ್‌ ಹೆಲ್ತ್‌ಕೇರ್‌ ಸ್ಥಾಪಿಸಿದ್ದರು. ಅಲ್ಲದೇ ರೆಲಿಗೇರ್‌ ಲ್ಯಾಬೋರೆಟರಿಸ್‌, ರೆಲಿಗೇರ್‌ ಎಂಟರ್‌ಪ್ರೈಸಸ್‌ ಲಿಮಿಟೆಸ್‌ ಹಾಗೂ ರೆಲಿಗೇರ್‌ ಟೆಕ್ನೊಲಜಿಸ್‌ನ  ಮುಖ್ಯ ಪ್ರವರ್ತಕರೂ ಹೌದು.

ಡೂನ್‌ ಸ್ಕೂಲ್‌ನಲ್ಲಿ ಕಲಿತಿರುವ ಶಿವಿಂದರ್‌ ಮೋಹನ್‌ ಸಿಂಗ್‌ ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕದ ಡ್ಯೂಕ್‌ ವಿ.ವಿ.ಯಿಂದ ಹೆಲ್ತ್‌ಕೇರ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

*
ಏನಿದು ರಾಧಾ ಸ್ವಾಮಿ ಸತ್ಸಂಗ
ಎಲ್ಲ ಧರ್ಮಗಳ ಆಧ್ಯಾತ್ಮಿಕ ಅಂಶಗಳನ್ನು ತೆಗೆದುಕೊಂಡು ರಾಧಾ ಸ್ವಾಮಿ ಸತ್ಸಂಗದ ಸಿದ್ಧಾಂತ ರೂಪಿಸಲಾಗಿದೆ. ನಮ್ಮೊಳಗೇ ಇರುವ ದೇವರ ದೈವಿಕತೆಯನ್ನು ಅರಿಯುವುದು ಮನುಷ್ಯನ ಹುಟ್ಟಿನ ಉದ್ದೇಶ. ಆ ದೈವಿಕತೆಯ ಅನುಭವವಾದಾಗ ಮಾತ್ರ , ದೇವರು ಒಬ್ಬನೇ, ನಾವೆಲ್ಲ ಆತನ ಪ್ರೀತಿಯ ಅಭಿವ್ಯಕ್ತಿಗಳು ಎಂಬುದರ ಅರಿವಾಗುತ್ತದೆ ಎಂದು ಈ ಪಂಥ ಹೇಳುತ್ತದೆ.

1891ರಲ್ಲಿ ಆರಂಭವಾದ ಸತ್ಸಂಗ ಈಗ 90 ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿದೆ. ಈ ಪಂಥ ಯಾವುದೇ ಧಾರ್ಮಿಕ ಆಚರಣೆಗಳನ್ನು ಹೊಂದಿಲ್ಲ. ಮೇಲು– ಕೀಳು, ಕಡ್ಡಾಯ ದೇಣಿಗೆ, ಸಭೆ– ಸಮಾರಂಭ ಯಾವುದೂ ಕಡ್ಡಾಯವಲ್ಲ. ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನದ ಮೂಲಕ ತನ್ನನ್ನು ಅರಿತುಕೊಳ್ಳುವುದು, ನೈತಿಕ ಜೀವನ ನಡೆಸುವುದು, ಸಸ್ಯಾಹಾರ ಸೇವನೆ ಇತ್ಯಾದಿಗಳನ್ನು ಅನುಸರಿಸಲಾಗುತ್ತದೆ. 

ಅಲ್ಲದೇ , ಸತ್ಸಂಗದ ಸದಸ್ಯರು ತಮಗೆ ಇಷ್ಟ ಬಂದ ಧರ್ಮ, ಸಂಸ್ಕೃತಿಯನ್ನು ಅನುಸರಿಸಬಹುದಾಗಿದೆ. ಪ್ರಸ್ತುತ ಬಾಬಾ ಗುರಿಂದರ್‌ ಸಿಂಗ್‌ ಸತ್ಸಂಗದ ಪ್ರಧಾನ ಗುರುವಾಗಿದ್ದು, ಬಿಯಾಸ್‌ನ ಮುಖ್ಯ ಕೇಂದ್ರದಲ್ಲಿ ತಮ್ಮ ಕುಟುಂಬದ ಜತೆ ವಾಸಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT