ADVERTISEMENT

ಫ್ಲ್ಯಾಟ್‌ಗಳನ್ನು ಕೊಳ್ಳುವವರಿಲ್ಲ

ಪಿಟಿಐ
Published 4 ಮಾರ್ಚ್ 2018, 19:58 IST
Last Updated 4 ಮಾರ್ಚ್ 2018, 19:58 IST
ಫ್ಲ್ಯಾಟ್‌ಗಳನ್ನು ಕೊಳ್ಳುವವರಿಲ್ಲ
ಫ್ಲ್ಯಾಟ್‌ಗಳನ್ನು ಕೊಳ್ಳುವವರಿಲ್ಲ   

ನವದೆಹಲಿ: ದೇಶದ ಏಳು ಪ್ರಮುಖ ನಗರಗಳಲ್ಲಿ 2017ರ ಅಂತ್ಯದ ವೇಳೆಗೆ 4.40 ಲಕ್ಷ ಮನೆಗಳು (ಫ್ಲ್ಯಾಟ್‌) ಮಾರಾಟವಾಗದೆ ಉಳಿದಿವೆ. ಬೆಂಗಳೂರು ನಗರದಲ್ಲಿ ಸುಮಾರು 70 ಸಾವಿರ ಮನೆಗಳು ಖಾಲಿ ಬಿದ್ದಿವೆ.

4.40 ಲಕ್ಷ ಮನೆಗಳ ಪೈಕಿ 34,700 ಮನೆಗಳು ತಕ್ಷಣ ವಾಸಕ್ಕೆ (ರೆಡಿ ಟು ಮೂವ್‌ ಇನ್‌) ಸಜ್ಜಾಗಿವೆ ಎಂಬ ಮಾಹಿತಿ ಗ್ಲೋಬಲ್‌ ಪ್ರಾಪರ್ಟಿ ಕನ್ಸಲ್ಟೆಂಟ್‌ ಸಂಸ್ಥೆ ಜೋನ್ಸ್‌ ಲಾಂಗ್‌ ಲಾಸಲ್ಲೆ ಇಂಡಿಯಾ (ಜೆಎಲ್‌ಎಲ್‌) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ದೆಹಲಿ ಹಾಗೂ ಸುತ್ತಮುತ್ತ ಅತಿ ಹೆಚ್ಚು ಅಂದರೆ, 1.50 ಲಕ್ಷ ಫ್ಲ್ಯಾಟ್‌ ಖಾಲಿ ಉಳಿದಿವೆ. ಚೆನ್ನೈ, ಮುಂಬೈ, ಬೆಂಗಳೂರು, ಪುಣೆ, ಹೈದರಾಬಾದ್‌, ಕೋಲ್ಕತ್ತದಲ್ಲೂ ಸಾವಿರಾರು ಮನೆಗಳು ಗ್ರಾಹಕರಿಗಾಗಿ ಕಾಯ್ದು ಕುಳಿತಿವೆ.

ADVERTISEMENT

ಚೆನ್ನೈನಲ್ಲಿ ವಾಸಕ್ಕೆ ಸಿದ್ಧವಾದ ಶೇ 20ರಷ್ಟು ಮತ್ತು ನೊಯಿಡಾ ಹಾಗೂ ಗ್ರೇಟರ್‌ ನೊಯಿಡಾದಲ್ಲಿ ಶೇ 60ರಷ್ಟು ನಿರ್ಮಾಣ ಹಂತದ ಫ್ಲ್ಯಾಟ್‌ಗಳು ಮಾರಾಟವಾಗದೆ ಉಳಿದಿವೆ.

ಹೊಸ ಯೋಜನೆಗಳಿಗೆ ಗ್ರಹಣ: ಮನೆಗಳ ಮಾರಾಟ ವೇಗ ಕುಸಿದ ಕಾರಣ ಹೊಸ ಕಟ್ಟಡಗಳ ನಿರ್ಮಾಣ, ಯೋಜನೆಗಳಿಗೂ ಗ್ರಹಣ ಹಿಡಿದಿದೆ. ಮುಂದಿನ ಕೆಲವು ತ್ರೈಮಾಸಿಕದಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಬಿಲ್ಡರ್‌ಗಳು, ಖರೀದಿದಾರರಿಗೆ ಆಕರ್ಷಕ ಕೊಡುಗೆ ಘೋಷಿಸುತ್ತಿದ್ದಾರೆ ಮತ್ತು ದರಗಳನ್ನು ಕಡಿತಗೊಳಿಸುತ್ತಿದ್ದಾರೆ. ಇಷ್ಟಾದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ.

ಗ್ರಾಹಕರು ನಿರ್ಮಾಣ ಹಂತದ ಮನೆಗಳಿಗಿಂತ ತಕ್ಷಣ ವಾಸಕ್ಕೆ ಯೋಗ್ಯವಾದ ಮನೆಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ಹೇಳಿದೆ.

ಹಲವು ಪೆಟ್ಟು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮತ್ತು ನೋಟು ರದ್ದತಿಗಳು ರಿಯಲ್‌ ಎಸ್ಟೇಟ್‌ ವಲಯಕ್ಕೆ ಭಾರಿ ಪೆಟ್ಟು ನೀಡಿವೆ.

ಇದರೊಂದಿಗೆ ರಿಯಲ್‌ ಎಸ್ಟೇಟ್‌ ವಲಯದಲ್ಲಾದ ಕಾನೂನು ಬದಲಾವಣೆ, ಕಠಿಣ ನಿಯಮಾವಳಿ ಇಂದಿನ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.

ದೇಶದ ವಸತಿ ಮಾರುಕಟ್ಟೆ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದೆ. ಇದರಿಂದಾಗಿ ರಿಯಲ್‌ ಎಸ್ಟೇಟ್‌ ವಲಯ ಪ್ರಗತಿ ಮಂದವಾಗಿದೆ ಎಂದು ಜೆಎಲ್‌ಎಲ್‌ ಸಂಸ್ಥೆಯ ದೇಶೀಯ ಮುಖ್ಯಸ್ಥ ರಮೇಶ್‌ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

* ಜೂನ್‌ ನಂತರ ರಿಯಲ್‌ ಎಸ್ಟೇಟ್‌ ವಲಯ ಸ್ಥಿರತೆ ಕಾಯ್ದುಕೊಳ್ಳಲಿದ್ದು, ವಸತಿ ಮಾರುಕಟ್ಟೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ

–ರಮೇಶ್‌ ನಾಯರ್‌, ಜೆಎಲ್‌ಎಲ್‌ ಇಂಡಿಯಾ ಮುಖ್ಯಸ್ಥ

ಅಂಕಿ–ಸಂಖ್ಯೆ

* 4,40,000 7ನಗರಗಳಲ್ಲಿ ಖಾಲಿ ಉಳಿದ ಫ್ಲ್ಯಾಟ್‌ ಸಂಖ್ಯೆ

* 34,700 ತಕ್ಷಣ ವಾಸಕ್ಕೆ ಸಿದ್ಧವಾದ ಫ್ಲ್ಯಾಟ್‌ ಸಂಖ್ಯೆ

ನಗರ–ಖಾಲಿ ಉಳಿದ ಫ್ಲ್ಯಾಟ್‌ ಸಂಖ್ಯೆ

ದೆಹಲಿ– 1,50,654

ಮುಂಬೈ– 86,000

ಬೆಂಗಳೂರು– 70,000

ಪುಣೆ– 36,000

ಹೈದರಾಬಾದ್‌– 28,000

ಕೋಲ್ಕತ್ತ–26,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.