ADVERTISEMENT

ಬಂಡುಕೋರರ ಮನವೊಲಿಕೆಗೆ ಬಿಜೆಪಿ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 20:21 IST
Last Updated 16 ಡಿಸೆಂಬರ್ 2012, 20:21 IST

ನವದೆಹಲಿ: ತಮ್ಮ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸುವಂತೆ ಕೆಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಬಹಿರಂಗವಾಗಿಯೇ ಸವಾಲು ಹಾಕಿದ್ದರೂ, ಬಿಜೆಪಿ ವರಿಷ್ಠರು ಭಿನ್ನಮತೀಯ ಶಾಸಕರನ್ನು ಪಕ್ಷದ ತೆಕ್ಕೆಗೆ ಮತ್ತೆ ಕರೆತರುವಂತೆ ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆ. ಭಿನ್ನರ ವಿರುದ್ಧ ಅವಸರದಲ್ಲಿ ಕ್ರಮ ಕೈಗೊಳ್ಳುವ ಬದಲು, ಅವರ ಮನವೊಲಿಕೆಗೆ ಯತ್ನಿಸುವಂತೆ ರಾಜ್ಯದ ಮುಖಂಡರಿಗೆ ಕಿವಿಮಾತು  ಹೇಳಲಾಗಿದೆ.

ಯಡಿಯೂರಪ್ಪ ಅವರು ಪಕ್ಷ ತೊರೆದ ನಂತರ ರಾಜ್ಯದ ಬಿಜೆಪಿ ಘಟಕದಲ್ಲಿ ಉದ್ಭವಿಸಿದ ಪರಿಸ್ಥಿತಿಗಳ ಕುರಿತು ಇತ್ತೀಚೆಗೆ ನಡೆದ  ಪಕ್ಷದ ಹೈಕಮಾಂಡ್ ಸಭೆಯಲ್ಲಿ ಚರ್ಚಿಸಲಾಯಿತು. ಯಡಿಯೂರಪ್ಪ ಅವರನ್ನು ಬೆಂಬಲಿಸಿರುವ 14 ಶಾಸಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅವರನ್ನು ಪಕ್ಷಕ್ಕೆ ಮತ್ತೆ ಕರೆತರಬೇಕು ಎಂದು ಈ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಶಿಸ್ತು ಕ್ರಮಕ್ಕೆ ಅವಸರ ಇಲ್ಲ: ಹಾವೇರಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಶಾಸಕರ ಪೈಕಿ ಬಹುತೇಕರು  ಒತ್ತಡ ಮತ್ತು ಅನಿವಾರ್ಯತೆಯಿಂದ ಅಲ್ಲಿಗೆ ಹೋಗಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಯಾವುದೇ ಅವಸರವಿಲ್ಲ. ಅವರಲ್ಲಿ ಬಹುತೇಕರು ತಮ್ಮ ನಿಲುವು ಬದಲಿಸಿಕೊಳ್ಳುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಬಿಜೆಪಿಯ ಕೇಂದ್ರ ನಾಯಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.


`ರಾಜ್ಯ ನಾಯಕರು ಈಗಾಗಲೇ ಭಿನ್ನಮತೀಯ ಶಾಸಕರ ಬಳಿ ಮಾತುಕತೆ ನಡೆಸುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಿದಲ್ಲಿ ಪಕ್ಷದಲ್ಲೇ ಉಳಿಯುವ ಭರವಸೆಯನ್ನೂ ಆ ಶಾಸಕರು ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಸೇರಿದಂತೆ ಅವರ ಬೇಡಿಕೆಗಳನ್ನೆಲ್ಲ ಪಕ್ಷ ಈಡೇರಿಸಲಿದೆ.

ಷೋಕಾಸ್ ನೋಟಿಸ್ ನೀಡುವ ಮೂಲಕ ಶಾಸಕರನ್ನು ರೊಚ್ಚಿಗೆಬ್ಬಿಸುವ ಬದಲು ಪಕ್ಷದಲ್ಲಿ ಇರುವುದರಿಂದ ಆಗುವ ಲಾಭಗಳ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವುದು ಒಳಿತು' ಎಂದೂ ಈ ನಾಯಕರು ಸಲಹೆ ನೀಡಿದ್ದಾರೆ. ಗುಜರಾತ್ ಚುನಾವಣೆಯ ಫಲಿತಾಂಶದ ನಂತರ ಪಕ್ಷದ ವರಿಷ್ಠ ನಾಯಕರು ಮತ್ತೊಮ್ಮೆ ಸಭೆ ಸೇರಲಿದ್ದಾರೆ. ಅಷ್ಟರಲ್ಲಿ ರಾಜ್ಯದ ಬಿಜೆಪಿ ನಾಯಕರು ಭಿನ್ನಮತೀಯರ ಬಳಿ ಚರ್ಚಿಸಿ ವರದಿ ನೀಡಲಿದ್ದಾರೆ.

ವಿಧಾನಸಭೆ ವಿಸರ್ಜನೆಗೆ ವಿರೋಧ:
ವಿಧಾನಸಭೆ ವಿಸರ್ಜನೆಗೆ ಪಕ್ಷದ ಕೆಲ ನಾಯಕರು ಸಲಹೆ ನೀಡಿದ್ದರೂ ಚುನಾವಣೆಯ ತನಕ ಸರ್ಕಾರ ಉಳಿಸಿಕೊಳ್ಳಬೇಕು. ಚುನಾವಣೆಯ ಸಮಯದಲ್ಲಿ ರಾಷ್ಟ್ರಪತಿ ಆಡಳಿತಕ್ಕಿಂತ ತಮ್ಮ ಸರ್ಕಾರ ಇದ್ದಲ್ಲಿ ಒಳಿತು ಎಂಬ ಧೋರಣೆಯನ್ನೂ ಕೇಂದ್ರ ನಾಯಕರು ಹೊಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಮಣಿಸಲು  ಶೆಟ್ಟರ್ ಅವರನ್ನು ಲಿಂಗಾಯತ ನಾಯಕನನ್ನಾಗಿ ಬಿಂಬಿಸುವ ನಿಟ್ಟಿನಲ್ಲಿಯೂ ಪಕ್ಷ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT