ADVERTISEMENT

ಬಂದ್ ಬಿಸಿ; ತರಕಾರಿ ತುಟ್ಟಿ

ಪಿಟಿಐ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಗ್ರಾಮ ಬಂದ್‌ನಿಂದ ವಹಿವಾಟು ನಡೆಯದ ಕಾರಣ ಪಟಿಯಾಲಾದ ಕೃಷಿ ಮಾರುಕಟ್ಟೆಯಲ್ಲಿ ಚೀಲಗಳ ಮೇಲೆ ಮಲಗಿರುವ ಕಾರ್ಮಿಕ –ಪಿಟಿಐ ಚಿತ್ರ
ಗ್ರಾಮ ಬಂದ್‌ನಿಂದ ವಹಿವಾಟು ನಡೆಯದ ಕಾರಣ ಪಟಿಯಾಲಾದ ಕೃಷಿ ಮಾರುಕಟ್ಟೆಯಲ್ಲಿ ಚೀಲಗಳ ಮೇಲೆ ಮಲಗಿರುವ ಕಾರ್ಮಿಕ –ಪಿಟಿಐ ಚಿತ್ರ   

ಚಂಡಿಗಡ: ಬೆಳೆಸಾಲ ಸಂಪೂರ್ಣ ಮನ್ನಾ ಮತ್ತು ಕೃಷಿಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ರೈತ ಸಂಘಟನೆಗಳು   ಹಲವು ರಾಜ್ಯಗಳಲ್ಲಿ ಆರಂಭಿಸಿರುವ 10 ದಿನಗಳ ‘ಗ್ರಾಮ ಬಂದ್’ ಮುಷ್ಕರ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಗ್ರಾಮ ಬಂದ್‌ನ ಅಂಗವಾಗಿ ನಗರ ಪ್ರದೇಶಗಳಿಗೆ ರೈತರು ತರಕಾರಿ ಮತ್ತು ಹಾಲು ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಉತ್ತರ ಭಾರತದ ಹಲವು ನಗರಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ತರಕಾರಿಗಳ ಬೆಲೆಗಳು ದಿಢೀರ್‌ ಗಗನಕ್ಕೆ ಏರಿವೆ.

ADVERTISEMENT

ರೈತರು ರಸ್ತೆಗೆ ತರಕಾರಿ ಮತ್ತು ಹಾಲನ್ನು ಸುರಿದು ಪ್ರತಿಭಟನೆ ನಡೆಸಿದ್ದಾರೆ. ನಗರ ಪ್ರದೇಶಗಳಿಗೆ ಹಣ್ಣು–ತರಕಾರಿ ಮತ್ತು ಹಾಲನ್ನು ಸಾಗಿಸುತ್ತಿದ್ದ ವಾಹನ ತಡೆದು, ಅವುಗಳಲ್ಲಿದ್ದ ಕೃಷಿ ಉತ್ಪನ್ನಗಳನ್ನು ರಸ್ತೆಗೆ ಸುರಿದಿದ್ದಾರೆ.

ಹರಿಯಾಣದ ಹಲವೆಡೆ ಹಾಲು ಸಂಸ್ಕರಣಾ ಘಟಕಗಳ ಬಾಗಿಲಿಗೆ ಅಡ್ಡಲಾಗಿ ಟ್ರ್ಯಾಕ್ಟರ್ ಮತ್ತು ಕಾರುಗಳನ್ನು ನಿಲ್ಲಿಸಿ ಹಾಲು ಸರಬರಾಜನ್ನು ತಡೆಯಲಾಗಿದೆ.

ಕಿಸಾನ್ ಏಕತಾ ಮಂಚ್ ಮತ್ತು ರಾಷ್ಟ್ರೀಯ ಕಿಸಾನ್ ಮಹಾ ಸಂಘಗಳ ನೇತೃತ್ವದಲ್ಲಿ 172 ರೈತ ಸಂಘಟನೆಗಳು ಗ್ರಾಮ ಬಂದ್‌ಗೆ ಬೆಂಬಲ ಸೂಚಿಸಿವೆ. 22ರಾಜ್ಯಗಳಲ್ಲಿ ಗ್ರಾಮಬಂದ್‌ ಆಚರಿಸಲಾಗುತ್ತದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.