ADVERTISEMENT

ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ:ಜನವಿರೋಧಿ- ಬಿಜೆಪಿ:ಸಹಿಸಲರ್ಹ: ತೃಣಮೂಲ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪ್ರಜಾವಾಣಿ ವಾರ್ತೆ/ಪಿಐಟಿ):  ಪ್ರಣವ್ ಮುಖರ್ಜಿ ಶುಕ್ರವಾರ ಮಂಡಿಸಿದ ಬಜೆಟ್‌ಗೆ ವಿರೋಧ ಪಕ್ಷಗಳು ಹಾಗೂ `ಯುಪಿಎ~ ಮಿತ್ರ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಾವಾಗಲೂ ಸರ್ಕಾರದ ವಿರುದ್ಧ ಕಿಡಿಕಾರುವ `ಯುಪಿಎ~ ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಈ ಬಜೆಟ್ ಸಹಿಸಲರ್ಹ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂದೋಪಾಧ್ಯಾಯ ಪಶ್ಚಿಮ ಬಂಗಾಳಕ್ಕೆ ನೀಡಿರುವ ಪರಿಹಾರದ ಪ್ಯಾಕೇಜ್ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಬಿಎಸ್‌ಪಿ ಇದು `ನಗರ ಕೇಂದ್ರಿತ~ ಎಂದು ಅಭಿಪ್ರಾಯ ಪಟ್ಟಿದೆ.
ಸರ್ಕಾರದ ಮತ್ತೊಬ್ಬ ಮಿತ್ರ ಪಕ್ಷವಾಗಿರುವ ಡಿಎಂಕೆ, ಬಜೆಟ್ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಶ್ಲಾಘಿಸಿದೆ.
ವಿರೋಧ ಪಕ್ಷಗಳು ಬಜೆಟ್ ಜನವಿರೋಧಿಯಾಗಿದೆ, ನೀರಸವಾಗಿದೆ ಎಂದು ಟೀಕಿಸಿವೆ.

ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಈ ಬಜೆಟ್ ಜನವಿರೋಧಿಯಾಗಿದೆ. ಮತ್ತಷ್ಟು ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದೆ.ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಎಂ, ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆಗೆ ಇದು ಕಾರಣವಾಗಲಿದೆ ಎಂದಿದೆ.

ಭಾರತ ಮತ್ತೊಮ್ಮೆ ತಲೆ ಎತ್ತುವ ಹಾದಿಯಲ್ಲಿದೆ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ. ಆರ್ಥಿಕ ಸೇರ್ಪಡೆಯ ಬಜೆಟ್ ಬದಲಾಗಿ ಆರ್ಥಿಕ ಬಲವರ್ಧನೆಯ ಹೆಸರಿನಲ್ಲಿ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.

ಈ ಬಜೆಟ್ ನಿಷ್ಪರಿಣಾಮಕಾರಿ ಹಾಗೂ ಯಾಂತ್ರಿಕವಾಗಿದೆ ಎಂದು ಹೇಳಿರುವ ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತ, ಹಣಕಾಸು ಸಚಿವಾಲಯದ ಗುಮಾಸ್ತರೇ ಇದನ್ನು ಸಿದ್ಧಪಡಿಸಬಹುದಿತ್ತು.
ಅದಕ್ಕಾಗಿ  ಪ್ರಣವ್ ಮುಖರ್ಜಿ ಶ್ರಮವಹಿಸುವ ಅಗತ್ಯ ಇರಲಿಲ್ಲ ಎಂದು ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.