ADVERTISEMENT

ಬನಾರಸ್‌ ಹಿಂದೂ ವಿವಿ ಆವರಣದಲ್ಲಿ ಮತ್ತೊಂದು ಕಿರುಕುಳ ಪ್ರಕರಣ

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

ಏಜೆನ್ಸೀಸ್
Published 13 ಅಕ್ಟೋಬರ್ 2017, 12:14 IST
Last Updated 13 ಅಕ್ಟೋಬರ್ 2017, 12:14 IST
ಬನಾರಸ್‌ ಹಿಂದೂ ವಿವಿ ಆವರಣದಲ್ಲಿ ಮತ್ತೊಂದು ಕಿರುಕುಳ ಪ್ರಕರಣ
ಬನಾರಸ್‌ ಹಿಂದೂ ವಿವಿ ಆವರಣದಲ್ಲಿ ಮತ್ತೊಂದು ಕಿರುಕುಳ ಪ್ರಕರಣ   

ವಾರಣಾಸಿ: ಕೇವಲ ಒಂದು ತಿಂಗಳ ಹಿಂದೆಯಷ್ಟೇ ವಿವಿಯ ಆವರಣದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಬೃಹತ್‌ ಪ್ರತಿಭಟನೆ ಎದುರಿಸಿದ್ದ ಬನಾರಸ್‌ ಹಿಂದೂ ವಿವಿಯಲ್ಲಿ ಮತ್ತೊಂದು ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.

ಬೈಕ್‌ನಲ್ಲಿ ಬಂದ ಮೂವರು ದುಷ‌್ಕರ್ಮಿಗಳು ವಿದ್ಯಾರ್ಥಿನಿಯನ್ನು ಚುಡಾಯಿಸಿ ಕಿರುಕುಳ ನೀಡಿರುವ ಘಟನೆ ಗುರುವಾರ ಸಂಜೆ ನಡೆದಿದ್ದು, ವಿವಿಯ ಆವರಣದಲ್ಲಿ ಹೆಣ್ಣು ಮಕ್ಕಳ ರಕ್ಷಣೆಯ ಕೂಗು ಮತ್ತೆ ಭುಗಿಲೆದ್ದಿದೆ.

ಕಳೆದ ಸೆಪ್ಟೆಂಬರ್‌ 21ರಂದು ಅಪರಿಚಿತರಿಬ್ಬರು ವಿವಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದ ಕೆರಳಿದ ವಿದ್ಯಾರ್ಥಿಗಳು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಯ ಆವರಣದಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು.

ADVERTISEMENT

ಇದಾದ ನಂತರ ವಿದ್ಯಾರ್ಥಿಯೊಬ್ಬ ತನ್ನನ್ನು ನಿಂದಿಸಿದ್ದಾನೆ ಎಂದು ಆರೋಪಿಸಿ ಅಕ್ಟೋಬರ್‌ 05ರಂದು ವಿವಿಯ ವಿದ್ಯಾರ್ಥಿನಿ ಆಡಳಿತ ಮಂಡಳಿಗೆ ದೂರು ನೀಡಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಡಳಿತ ಮಂಡಳಿ, ವಿದ್ಯಾರ್ಥಿಯನ್ನು ವಿವಿಯಿಂದ ಅಮಾನತು ಮಾಡಿತ್ತು.

ಈ ಎರಡು ಪ್ರಕರಣಗಳ ಬಳಿಕ ವಿವಿಯ ಆವರಣವನ್ನು ‘ಸೂಕ್ಷ್ಮ ಪ್ರದೇಶ’ ಎಂದು ಗುರುತಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ 52 ಸಿಸಿ ಕ್ಯಾಮೆರಾಗಳು ಹಾಗೂ 30 ಹಾಲೋಜೆನ್‌ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಜತೆಗೆ ಒಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗಿತ್ತು.

ಹೀಗಿದ್ದರೂ ಮಾರ್ಕೆಟ್‌ಗೆ ಹೋಗಿ ಹಾಸ್ಟೆಲ್‌ಗೆ ವಾಪಾಸ್‌ ಆಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಗುರುವಾರ ಸಂಜೆ ಕಿರುಕುಳ ಎಸಗಲಾಗಿದೆ. ಬೈಕ್‌ನಲ್ಲಿ ಬಂದ ಆಗಂತುಕರು ವಿದ್ಯಾರ್ಥಿನಿಯನ್ನು ಚುಡಾಯಿಸಿ ಆಕೆಯ ಹಣೆಗೆ ಬಲವಾಗಿ ಹೊಡೆದು ಪಲಾಯನ ಮಾಡಿದ್ದಾರೆ.

ಸಂತ್ರಸ್ತೆ ಕೂಡಲೇ ವಿವಿಯ ತುರ್ತು ಪ್ರತಿಕ್ರಿಯೆ ತಂಡಕ್ಕೆ ವಿಷಯ ತಿಳಿಸಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವಿಯ ಹಿರಿಯ ಅಧಿಕಾರಿಯೊಬ್ಬರು, ‘ದೂರು ಕೇಳಿ ಬಂದ ಕೂಡಲೇ ಕ್ರಮ ಕೈಗೊಂಡು ಆರೋಪಿಗಳಿಗಾಗಿ ಇಡೀರಾತ್ರಿ ಹುಡುಕಾಟ ನಡೆಸಲಾಗಿದೆ. ಮೂವರು ಪ್ರಯಾಣಿಸುವ ಪ್ರತಿಯೊಂದು ಬೈಕ್‌ನ್ನೂ ವಿಚಾರಣೆಗೊಳಪಡಿಸಲಾಗಿದೆ. ಆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಘಟನೆ ವಿದ್ಯಾರ್ಥಿನಿಯ ಅರಿವಿಗೆ ಬಾರದೆ ತಕ್ಷಣ ಸಂಭವಿಸಿರುವುದರಿಂದ ಕಿಡಿಗೇಡಿಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.