ADVERTISEMENT

ಬರ ಪರಿಸ್ಥಿತಿ ಇಲ್ಲ-ಪವಾರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ನವದೆಹಲಿ: ಮುಂಗಾರು ಕೊರತೆ ಶೇ 23ರಷ್ಟಿದ್ದರೂ ದೇಶದಲ್ಲಿ ಇದುವರೆಗೆ ಬರ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಕೃಷಿ ಸಚಿವ ಶರದ್‌ಪವಾರ್ ಸೋಮವಾರ ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಬಳಿ ತುರ್ತು ಪರಿಹಾರ ಯೋಜನೆ ಸಿದ್ಧವಿದೆ ಎಂದು ನವದೆಹಲಿಯಲ್ಲಿ ನಡೆದ 84ನೇ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪವಾರ್     ಹೇಳಿದರು.

ಮುಂಗಾರು ವೈಫಲ್ಯವು ಈ ವರ್ಷ ಆಹಾರಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ ಪವಾರ್, ಹೆಚ್ಚು ಮಳೆಯಾಗಿರುವ ಪಂಜಾಬ್, ಹರಿಯಾಣ, ಛತ್ತೀಸ್‌ಗಡ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬತ್ತ ಬಿತ್ತನೆ ಕಾರ್ಯ ಮುಂದುವರಿದಿರುವುದರಿಂದ ಪರಿಸ್ಥಿತಿ  ಸುಧಾರಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕರ್ನಾಟಕದ 23 ಜಿಲ್ಲೆಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಪರಿಸ್ಥಿತಿಯನ್ನು ಎದುರಿಸಲು  ರೈತರಿಗೆ ನೆರವಾಗುವುದಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಅನಿರೀಕ್ಷಿತ ಸಂದರ್ಭದ ಯೋಜನೆಯನ್ನು ಸಿದ್ಧಪಡಿಸಿವೆ ಎಂದು ಪವಾರ್ ನುಡಿದರು.

ಕಳೆದ ಎರಡು ವರ್ಷ ರಾಷ್ಟ್ರದಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಮಟ್ಟಕ್ಕೆ ಏರಿತ್ತು.  2011-12ರಲ್ಲಿ ಭಾರತವು ದಾಖಲೆಯ 25.2 ಕೋಟಿ ಟನ್‌ಗಳಷ್ಟು ಆಹಾರಧಾನ್ಯಗಳನ್ನು ಉತ್ಪಾದಿಸಿತ್ತು. ಆದರೆ, ಈ ವರ್ಷ ಮುಂಗಾರು ಕೈಕೊಟ್ಟಿರುವುದು ಬತ್ತ, ಧಾನ್ಯಗಳ ಬಿತ್ತನೆ ಮೇಲೆ ತೀವ್ರ ಪರಿಣಾಮ ಬೀರಿದೆ.

ಕಳೆದ ಎರಡು ವರ್ಷ ಆಹಾರಧಾನ್ಯಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಆಗಿದ್ದರಿಂದ ಈ ವರ್ಷ 50 ಲಕ್ಷ ಟನ್‌ಗಳಷ್ಟು ಅಕ್ಕಿ, 15 ಲಕ್ಷ ಟನ್ ಗೋಧಿ, 25 ಲಕ್ಷ ಟನ್ ಸಕ್ಕರೆ, 1.15 ಕೋಟಿ ಮೂಟೆ ಹತ್ತಿಯನ್ನು ರಫ್ತು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಶರದ್ ಪವಾರ್ ಹೇಳಿದರು.

11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007-12) ಕೃಷಿ ವಲಯವು ಶೇ 3.3ರಷ್ಟು ಪ್ರಗತಿ ಕಂಡಿದ್ದು, ಪ್ರಸ್ತುತ ಯೋಜನೆಯಲ್ಲಿ ಪ್ರಗತಿಯನ್ನು ಶೇ 4ಕ್ಕೆ ಹೆಚ್ಚಿಸುವ ುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.