ADVERTISEMENT

ಬರ, ಮಳೆ ಮುನ್ಸೂಚನೆ ಇನ್ನಷ್ಟು ನಿಖರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST

ನವದೆಹಲಿ: ರಾಷ್ಟ್ರದ ಭೌಗೋಳಿಕ ವ್ಯಾಪ್ತಿಯನ್ನು ನಾಲ್ಕು ವಿಶಾಲ ವಲಯಗಳಾಗಿ ವಿಂಗಡಿಸಿ ಹವಾಮಾನ ಮುನ್ಸೂಚನೆ ನೀಡುತ್ತಿದ್ದ ಹವಾಮಾನ ಇಲಾಖೆಯು, ಮುಂದಿನ ದಿನಗಳಲ್ಲಿ ಅದನ್ನು 10 ಚಿಕ್ಕ ವಲಯಗಳಾಗಿ ವಿಂಗಡಿಸಿ ಮುನ್ಸೂಚನೆ ನೀಡಲು  ಸಜ್ಜಾಗಲಿದೆ. ಅಷ್ಟೇ ಅಲ್ಲದೆ, ಪ್ರವಾಹ ಹಾಗೂ ಬರ ಸ್ಥಿತಿಯನ್ನು ಕೂಡ ಇನ್ನು ಮುಂದೆ ನಿಖರವಾಗಿ ಹೇಳಲಿದೆ.

ಈ ಹಿಂದೆ ಇಲಾಖೆಗೆ ಪ್ರವಾಹ ಹಾಗೂ ಬರದ ಬಗ್ಗೆ ಮುನ್ಸೂಚನೆ ನೀಡಲು ಸಾಧ್ಯವಾಗುತ್ತಿರಲಿಲ್ಲ. 2002, 2004 ಹಾಗೂ 2009ರಲ್ಲಿ ಬರ ಸ್ಥಿತಿಯ ಬಗ್ಗೆ  ಮುನ್ನೆಚ್ಚರಿಕೆ ನೀಡಲು ಆಗಿರಲಿಲ್ಲ.

`ಹವಾಮಾನ ಇಲಾಖೆಯ ಬಳಿ ಇರುವ ಕಂಪ್ಯೂಟರಿನ ಲೆಕ್ಕಾಚಾರ ಸಾಮರ್ಥ್ಯದ ಮಿತಿಯೇ ಇದಕ್ಕೆ ಮುಖ್ಯ ಅಡ್ಡಿ. ಹವಾಮಾನ ಮುನ್ಸೂಚನೆ ಅಂದಾಜಿಸಲು ಕನಿಷ್ಠ 100 ವರ್ಷಗಳ ಋತುಚಕ್ರದ ದಾಖಲೆಗಳನ್ನು ಕ್ರೋಡೀಕರಿಸಿ ಲೆಕ್ಕ ಹಾಕಬೇಕಾಗುತ್ತದೆ. ಆದರೆ, ನಮ್ಮ ಕಂಪ್ಯೂಟರಿನಲ್ಲಿ ಈಗ 28 ವರ್ಷಗಳ ಅಂಕಿಅಂಶಗಳನ್ನು ಮಾತ್ರ ಲೆಕ್ಕಾಚಾರ ಹಾಕಲು ಸಾಧ್ಯ~ ಎಂದು ಕೇಂದ್ರ ಭೂವಿಜ್ಞಾನಗಳ ಇಲಾಖೆ ಕಾರ್ಯದರ್ಶಿ ಶೈಲೇಶ್ ನಾಯಕ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ADVERTISEMENT

ಮುಂಗಾರು ಮಿಷನ್ ಯೋಜನೆ: ಈ ಕೊರತೆ ನೀಗುವ ಉದ್ದೇಶದಿಂದ ಕೇಂದ್ರ ಸಂಪುಟವು ಗುರುವಾರ ರೂ 400 ಕೋಟಿ ರಾಷ್ಟ್ರೀಯ ಮುಂಗಾರು ಮಿಷನ್ ಯೋಜನೆಗೆ ಅಂಗೀಕಾರ ನೀಡಿದೆ.

ಇದರ ಅಡಿ 2.5 ಪೆಟಾಫ್ಲಾಪ್‌ನ ಸೂಪರ್ ಕಂಪ್ಯೂಟರನ್ನು ಇಲಾಖೆಗೆ ಒದಗಿಸಲಾಗುವುದು. ಇದು ರಾಷ್ಟ್ರದ ಅತ್ಯಧಿಕ ಸಾಮರ್ಥ್ಯದ ಕಂಪ್ಯೂಟರ್‌ಗಳಲ್ಲಿ ಒಂದಾಗಿದ್ದು,  ಪ್ರತಿ ಸೆಕೆಂಡಿಗೆ 2500 ಕ್ವಾಡ್ರಿಲಿಯನ್ ಲೆಕ್ಕಾಚಾರಗಳನ್ನು (2500ರ ಮುಂದೆ 24 ಸೊನ್ನೆಗಳನ್ನು ಹಾಕಿದರೆ ಸಿಗುವ ಸಂಖ್ಯೆ) ಬಿಡಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.