ADVERTISEMENT

ಬಲಿಷ್ಠ ರಾಷ್ಟ್ರಕ್ಕಾಗಿ ಚುನಾವಣೆ: ಅಮಿತ್‌ ಶಾ

ಪಿಟಿಐ
Published 2 ಮಾರ್ಚ್ 2019, 16:53 IST
Last Updated 2 ಮಾರ್ಚ್ 2019, 16:53 IST
.
.   

ಉಮರಿಯಾ,ಮಧ್ಯಪ್ರದೇಶ: ‘ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಪರಿವರ್ತಿಸಲು ಚುನಾವಣೆ ನಡೆಯಬೇಕಾಗಿದೆಯೇ ಹೊರತು ಒಂದು ಕುಟುಂಬದ ಯುವರಾಜನನ್ನು ಪ್ರಧಾನಿಯನ್ನಾಗಿ ಮಾಡುವ ಉದ್ದೇಶಕ್ಕಾಗಿ ಅಲ್ಲ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ ಇಲ್ಲಿ ನಡೆದ ಬಿಜೆಪಿಯ ‘ವಿಜಯ್‌ ಸಂಕಲ್ಪ’ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ದೇಶ ಮತ್ತು ದೇಶದ ಆರ್ಥಿಕತೆಗಾಗಿ, ಚುನಾವಣೆಗಳು ನಡೆಯಬೇಕು. ದೇಶದ ಹೆಮ್ಮೆಯನ್ನು ಗಗನದೆತ್ತರಕ್ಕೆ ಕೊಂಡೊಯ್ಯಬೇಕು. ಭದ್ರತೆಯನ್ನು ಬಲಪಡಿಸಬೇಕು. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು. ಇವೆಲ್ಲವುಗಳನ್ನು ದೇಶದ 50 ಕೋಟಿ ಬಡವರ ಹಿತಾಸಕ್ತಿ ದೃಷ್ಟಿಯಿಂದ ಮಾಡಬೇಕಾಗಿದೆ. ಪ್ರಧಾನಿಯಾಗಬೇಕು ಎನ್ನುವ ವಯಸ್ಸಾದ ಕೆಲವು ನಾಯಕರ ಆಸೆ ಪೂರೈಸಲು ಅಥವಾ ತನ್ನ ಯುವರಾಜನನ್ನು ಪ್ರಧಾನಿಯನ್ನಾಗಿ ಮಾಡುವ ಕುಟುಂಬದ ಇಚ್ಛೆಗಾಗಿ ಅಲ್ಲ’ ಎಂದು ವ್ಯಂಗ್ಯವಾಡಿದರು.

ಪಾಕಿಸ್ತಾನದಲ್ಲಿನ ಉಗ್ರರ ಶಿಬಿರದ ಮೇಲೆ ವಾಯು ದಾಳಿ ನಡೆಸಿರುವುದಕ್ಕೆ ಶಂಕೆ ವ್ಯಕ್ತಪಡಿಸಿರುವ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ವಿರುದ್ಧ ಹರಿಹಾಯ್ದ ಶಾ, ‘ದೇಶದ ಯೋಧರ ರಕ್ತ ಹೀರಿರುವವರ ವಿರುದ್ಧ ಸೇಡು ತೀರಿಸಿಕೊಳ್ಳುವ ಧೈರ್ಯ ನಿಮಗಿರಲಿಲ್ಲ. ನರೇಂದ್ರ ಮೋದಿ ಮಾತ್ರ ಅಂತಹ ಕಾರ್ಯ ಮಾಡುತ್ತಿದ್ದಾರೆ. ಆದರೆ, ವಾಯು ದಾಳಿ ನಡೆದಿದೆಯೇ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಈ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

* ಮೋದಿ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಉಗ್ರರ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಗೆ ಗುಂಡಿನಿಂದಲೇ ಪ್ರತ್ಯುತ್ತರ ನೀಡಲಾಗಿದೆ. ಉರಿ ದಾಳಿಗೆ ತಕ್ಕರ ಉತ್ತರ ನೀಡಲಾಗಿದೆ.

ಅಮಿತ್‌ ಶಾಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.