ADVERTISEMENT

ಬಸ್ ಮಗುಚಿ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬಜ್ಪೆ (ದಕ್ಷಿಣ ಕನ್ನಡ): ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಒಯ್ಯುತ್ತಿದ್ದ ಮಿನಿ ಬಸ್ ಬಜ್ಪೆ ಸಮೀಪದ ಶಾಂತಿಗುಡ್ಡೆಯಲ್ಲಿ ಭಾನುವಾರ ಪಲ್ಟಿ ಹೊಡೆದು 3 ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೂಂಜಾ ಲಾಯ್ಡ ಕಂಪೆನಿಯ ಕೂಲಿ ಕಾರ್ಮಿಕರಾದ ಬಿಹಾರದ ಸಂಜಯ್ ಕುಮಾರ್ ಯಾದವ್ (30), ಪಶ್ಚಿಮ ಬಂಗಾಳದ ಜೋಗೇಶ್ವರ ರಾಯ್ (40) ಮತ್ತು ಉತ್ತರ ಪ್ರದೇಶದ ಮಾಣಿಕ್‌ಚಂದ್ (41) ಮೃತಪಟ್ಟವರು. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಹಕರಿಸಿದರು.

ಮಧ್ಯಾಹ್ನ 1ಕ್ಕೆ ಕೆಲಸ ಮುಗಿಸಿ ಜೋಕಟ್ಟೆಯಲ್ಲಿನ ಕಂಪೆನಿಯಿಂದ ಕೊಂಚಾಡಿಯ ಕಾರ್ಮಿಕರ ಕಾಲೊನಿಗೆ ಸಿಬ್ಬಂದಿ ಸಾಗಿಸುವ ವೇಳೆ ಈ ದುರಂತ ಸಂಭವಿಸಿದೆ. ಅಂಕುಡೊಂಕಾದ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ ಎದುರಿನಿಂದ ಬರುತ್ತಿದ್ದ ಲಾರಿಗೆ ಜಾಗ ಬಿಡಲು ಬದಿಗೆ ಸರಿದಾಗ ಉರುಳಿತು.

32 ಮಂದಿ ಸಾಮರ್ಥ್ಯದ ಈ ಬಸ್‌ನಲ್ಲಿ 70 ಮಂದಿ ಇದ್ದರು. ಮೂವರು ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿದ್ದರು. ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಈ ವೇಳೆ ಮೂವರು ಬಸ್ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.