ADVERTISEMENT

ಬಾಂಬ್ ಪತ್ತೆ ಪ್ರಕರಣ: ದಂಪತಿ ದೂರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಮದುರೆ (ಪಿಟಿಐ): ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆಯ ಸಂದರ್ಭದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ದಂಪತಿ ಸಲ್ಲಿಸಿರುವ ಅರ್ಜಿಯ ಪರಿಶೀಲನೆ ನಡೆಸಿದ ಮದ್ರಾಸ್ ಹೈಕೋರ್ಟ್, ವಿಶೇಷ ತನಿಖಾ ತಂಡದ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ಮದುರೆ ಪೀಠದ ನ್ಯಾಯಮೂರ್ತಿ ಕೆ.ಕೆ.ಶಶಿಧರನ್ ಅವರು ಜನವರಿ 18ರೊಳಗಾಗಿ ಉತ್ತರ ನೀಡುವಂತೆ ವಿಶೇಷ ತನಿಖಾ ತಂಡದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನೋಟಿಸ್‌ನಲ್ಲಿ ಆದೇಶಿಸಿದ್ದಾರೆ.

ಕಳೆದ ಅಕ್ಟೋಬರ್ 27ರಂದು ಅಡ್ವಾಣಿ ಅವರ ಜನಚೇತನ ಯಾತ್ರೆ ಹಾದುಹೋಗುತ್ತಿದ್ದ ಸಂದರ್ಭದಲ್ಲಿ ಇಲ್ಲಿಂದ 30 ಕಿ.ಮೀ ದೂರದ ಆಲಂಪಟ್ಟಿ ಗ್ರಾಮದ ಬಳಿಯ ಸೇತುವೆಯ ಅಡಿ ಶಕ್ತಿಶಾಲಿ ಪೈಪ್ ಬಾಂಬ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದರು.

`ಈ ಪ್ರಕರಣಕ್ಕೆ ಸಂಬಂಧಿಸಿ, ತನಿಖೆಯ ನೆಪದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪದೇ ಪದೇ ತಮ್ಮನ್ನು ವಿಚಾರಣೆಗೆ ಗುರಿಪಡಿಸುವ ಮೂಲಕ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ನಡೆಸುತ್ತ್ದ್ದಿದಾರೆ. ಪೊಲೀಸರ ಇಂಥ ಅಸಾಂವಿಧಾನಿಕ ಕೃತ್ಯಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು~ ಎಂದು ತೆಂಕಾಶಿಯ ಸಯ್ಯದ್ ಸುಲೇಮಾನ್ ಸೇಠ್ ಮತ್ತು ಸಫರುನ್ನೀಸಾ ದಂಪತಿ ನ್ಯಾಯಾಲಯವನ್ನು ಕೋರಿದ್ದರು.

ಬೆಂಗಳೂರು ಮತ್ತು ಚೆನ್ನೈನಲ್ಲಿ ಕ್ಯಾಂಟೀನ್ ನಡೆಸುತ್ತಿರುವ ತಾವು ಯಾವುದೇ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ದಂಪತಿ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಥಳೀಯ ಪೊಲೀಸರಿಗೆ ತಿಳಿಸಿರುವ ಕಾರಣ ನಮ್ಮ ಕ್ಯಾಂಟೀನ್ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಲು ಅವರು ಅನುಮತಿ ನೀಡಿದ್ದರು. ಆದರೂ ವಿಶೇಷ ತನಿಖಾ ತಂಡದ ಇನ್‌ಸ್ಪೆಕ್ಟರ್ ತನಿಖೆಯ ನೆಪದಲ್ಲಿ ನಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ದಂಪತಿ ಅರ್ಜಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.