ADVERTISEMENT

ಬಾಕಿ ಪಾವತಿಗೆ ಕೇಜ್ರಿವಾಲ್ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಭಾರತೀಯ ಕಂದಾಯ ಸೇವೆಯಲ್ಲಿದ್ದಾಗ (ಐಆರ್‌ಎಸ್) ಆದಾಯ ತೆರಿಗೆ ಇಲಾಖೆಗೆ ಕಟ್ಟಬೇಕಿದ್ದ 9 ಲಕ್ಷ ರೂಪಾಯಿ ಬಾಕಿ ಪಾವತಿಸಲು ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಕೊನೆಗೂ ನಿರ್ಧರಿಸಿದ್ದಾರೆ.

ಈ ಮೂಲಕ, ಕೇಜ್ರಿವಾಲ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ತಮ್ಮ ಈ ನಿರ್ಧಾರವನ್ನು ತಪ್ಪಾಗಿ ಅರ್ಥೈಸಬಾರದು ಎಂದಿರುವ ಅವರು, `ಬಾಕಿ ಪಾವತಿಸಲು ಮುಂದಾದ ಮಾತ್ರಕ್ಕೆ ನಾನು ಸರ್ಕಾರ ಮಾಡಿರುವ ಆರೋಪವನ್ನು ಒಪ್ಪಿಕೊಂಡಿದ್ದೇನೆ ಎಂದು ಭಾವಿಸಬಾರದು. ಈ ವಿಷಯದಲ್ಲಿ ನನಗೆ ಕೋರ್ಟ್ ಮೆಟ್ಟಿಲು ಹತ್ತುವ ಹಕ್ಕು ಇದೆ~ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

`ಲೋಕಪಾಲ್ ಕುರಿತ ಬಹಿರಂಗ ಚರ್ಚೆಯ ದಿಕ್ಕು ತಪ್ಪಿಸಬಾರದು ಎಂಬ ಉದ್ದೇಶದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಸ್ನೇಹಿತರಿಂದ ಸಾಲ ತೆಗೆದುಕೊಂಡಾದರೂ ಬಾಕಿ ಪಾವತಿಸುತ್ತೇನೆ~ ಎಂದು ರಾಳೇಗಣಸಿದ್ಧಿಯಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದೇ ತಿಂಗಳು 27ಕ್ಕೆ ಬಾಕಿ ಪಾವತಿಸುವಂತೆ ಇಲಾಖೆ ಅರವಿಂದ್ ಅವರಿಗೆ ಗಡುವು ನೀಡಿತ್ತು. ಆದರೆ ಅವರು ನಿಗದಿಯಂತೆ ತೆರಿಗೆ ಕಟ್ಟಲು ವಿಫಲರಾಗಿದ್ದರು.

ಅಧ್ಯಯನಕ್ಕಾಗಿ 2000ರ ನವೆಂಬರ್ 1ರಿಂದ ಎರಡು ವರ್ಷಗಳ ಕಾಲ ಕೇಜ್ರಿವಾಲ್ ವೇತನ ಸಹಿತ ರಜೆಯ ಮೇಲೆ ಹೋಗಿದ್ದರು. ಒಂದು ವೇಳೆ ರಜೆ ಮುಗಿದ ಮೂರು ವರ್ಷಗಳ ಒಳಗೆ ವಾಪಸಾಗದಿದ್ದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ನಿವೃತ್ತಿ ಹೊಂದಿದರೆ ತಾವು ತೆಗೆದುಕೊಂಡ ವೇತನವನ್ನು ವಾಪಸ್ ಮಾಡುವುದಾಗಿ ಅವರು ಕರಾರುಪತ್ರಕ್ಕೆ ಸಹಿ ಹಾಕಿದ್ದರು. 2002ರ ನವೆಂಬರ್ 1ರಂದು ಮತ್ತೆ ಸೇವೆಗೆ ಮರಳಿದರೂ 18 ತಿಂಗಳ ಬಳಿಕ ವೇತನ ರಹಿತ ರಜೆ ಮೇಲೆ ಹೋಗಿದ್ದರು. ಇದು ಕರಾರುಪತ್ರ ನಿಯಮದ ಉಲ್ಲಂಘನೆ ಎಂದು ಸರ್ಕಾರ ಆರೋಪಿಸಿದೆ. ಆದರೆ ಕೇಜ್ರಿವಾಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. 9.27 ಲಕ್ಷ ರೂಪಾಯಿ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಿಂದ ಆಗಸ್ಟ್ 5 ರಂದು ಕೇಜ್ರಿವಾಲ್ ಅವರಿಗೆ ನೋಟಿಸ್ ಬಂದಿತ್ತು.

ಬಾಕಿ ಪಾವತಿಸದ ಇತರರು: ಬಾಕಿ ಹಣ ಪಾವತಿಗೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕಂದಾಯ ಸೇವೆಯ ನಾಲ್ವರು ಅಧಿಕಾರಿಗಳ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿಲ್ಲ.

2007-11ರ ಅವಧಿಯಲ್ಲಿ 15 ಕಂದಾಯ ಸೇವಾ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಇವರಲ್ಲಿ ಎಸ್.ಪದ್ಮ ಕುಮಾರ್, ಕೇಜ್ರಿವಾಲ್, ಎ.ಕೆ.ವರ್ಮ ಹಾಗೂ ಅಶೋಕ್ ಮಿತ್ತಲ್ ಅವರ ರಾಜೀನಾಮೆ ಅಂಗೀಕಾರ ಇನ್ನೂ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಚಂದ್ರ ಅಗರ್‌ವಾಲ್ ಅವರಿಗೆ ಸರ್ಕಾರ ಪ್ರತಿಕ್ರಿಯೆ ನೀಡಿದೆ.ಈ ಅವಧಿಯಲ್ಲಿ 145 ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ಸಹ ತಿಳಿಸಿದೆ.

ಆರ್‌ಎಸ್‌ಎಸ್‌ಗೆ ಕೃತಘ್ನ: ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲ ನೀಡಿದ ಆರ್‌ಎಸ್‌ಎಸ್‌ಗೆ ಅಣ್ಣಾ ಹಜಾರೆ ಕೃತಘ್ನರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.

`ಈ ವಿಷಯದಲ್ಲಿ ಬಾಬಾ ರಾಮ್‌ದೇವ್ ಆರ್‌ಎಸ್‌ಎಸ್‌ಗೆ ಅತ್ಯಂತ ನಿಷ್ಠರಾಗಿದ್ದಾರೆ. ಆದರೆ ಅಣ್ಣಾ ಯಾಕೆ ಕೃತಘ್ನರಾಗಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ?~ ಎಂದು ಸಿಂಗ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.