ADVERTISEMENT

`ಬಾನಿಗೇರಿದ್ದರೂ ಭುವಿಯ ಸೆಳೆತ'

ಗಗನಯಾತ್ರಿ ಸುನೀತಾ ವಿಲಿಯಮ್ಸ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST
ನವದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ ಸೋಮವಾರ ವಿದ್ಯಾರ್ಥಿ- ಶಿಕ್ಷಕರೊಂದಿಗೆ ಸಂವಾದ ನಡೆಸಿದರು	 -ಪಿಟಿಐ ಚಿತ್ರ
ನವದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ ಸೋಮವಾರ ವಿದ್ಯಾರ್ಥಿ- ಶಿಕ್ಷಕರೊಂದಿಗೆ ಸಂವಾದ ನಡೆಸಿದರು -ಪಿಟಿಐ ಚಿತ್ರ   

ನವದೆಹಲಿ : ಮುನ್ನೂರು ಇಪ್ಪತ್ತೆರಡು ದಿನಗಳ ಕಾಲ ಮುಂಜಾನೆ ತಂಗಾಳಿಯ ಅನುಭವ,  ಪ್ರೀತಿಯ ನಾಯಿ ಮರಿಯೊಂದಿಗೆ ಬೀಚ್‌ನಲ್ಲಿನ ವಿಹಾರ,  ತುಂತುರು ಮಳೆ ಹನಿಗಳ ಸ್ಪರ್ಶ, ಪತಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಾಣಿಗಳ ನಡುವಿನ ಸಂವಹನ.. ಇಂಥ ಅನೂಹ್ಯ ಅನುಭವಗಳಿಂದ ವಂಚಿತಳಾಗಿದ್ದೆ...

ಬಾಹ್ಯಾಕಾಶ ನಡಿಗೆಯಲ್ಲಿ ವಿಶ್ವ ದಾಖಲೆ ಬರೆದ ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ 322 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ `ಆ ದಿನಗಳನ್ನು' ಇಲ್ಲಿನ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ  ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ನೆನಪಿಸಿಕೊಂಡ ಪರಿ ಇದು.

`ನಾನು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಷ್ಟು ದಿನ ಪ್ರಕೃತಿಯ ಮಧ್ಯೆ ಓಡಾಡಿಕೊಂಡಿರಬೇಕೆಂಬ ಬಯಕೆಯಾಗುತ್ತಿತ್ತು. ಮೆಕ್ಸಿಕೊ ಮೇಲೆ ತೇಲುತ್ತಿದ್ದಾಗ, ದಟ್ಟೈಸಿದ್ದ ಮೋಡವನ್ನು ನೋಡಿ ಮಳೆಯಲ್ಲಿ ತೊಯ್ದು ಕುಣಿದಾಡಬೇಕೆಂಬ ಬಯಕೆ ಉಂಟಾಗಿತ್ತು' ಎಂದು ಸುನೀತಾ ವಿದ್ಯಾರ್ಥಿಗಳೊಂದಿಗೆ ಗಗನದೊಳಗಿದ್ದಾಗಿನ ಮನದ ತುಡಿತಗಳನ್ನು ಹಂಚಿಕೊಂಡರು. ಗಗನ ಯಾನಕ್ಕೆ ಹೊರಟಾಗ, ಭಗವದ್ಗೀತೆ ಪುಸ್ತಕ, ಗಣೇಶ ವಿಗ್ರಹ ಮತ್ತು ಸಮೋಸಾ ಕೊಂಡೊಯ್ದಿದ್ದನ್ನು ನೆನಪಿಸಿಕೊಳ್ಳುವ ಮೂಲಕ, ಭಾರತದೊಂದಿಗಿನ ತಮಗಿರುವ ಭಾವನಾತ್ಮಕ ಸಂಬಂಧವನ್ನು ಸುನಿತಾ ಬಿಚ್ಚಿಟ್ಟರು.

`ವರ್ಷಗಳ ಹಿಂದಷ್ಟೇ ಗಗನಯಾನ ಪೂರ್ಣಗೊಳಿಸಿರುವ ನಾನು, ತಕ್ಷಣದಲ್ಲೇ ಮತ್ತೊಮ್ಮೆ ಯಾತ್ರೆ ಆರಂಭಿಸಲು ಸಾಧ್ಯವಿಲ್ಲ. ನನ್ನ ದೇಹದಲ್ಲಿರುವ ಕಾಸ್ಮಿಕ್ ವಿಕಿರಣಗಳು ಸಂಪೂರ್ಣವಾಗಿ ನಾಶವಾದ ನಂತರವೇ ಮತ್ತೆ ಗಗನಯಾತ್ರೆಗೆ ಸಮರ್ಥಳಾಗುತ್ತೇನೆ' ಎಂದು ಅವರು ಹೇಳಿದರು.

`ಬಾಹ್ಯಾಕಾಶ ಒಂದು ವಿಸ್ಮಯ ತಾಣ. ಆ ತಾಣವನ್ನು ಹೊಕ್ಕಾಗ ಸುಂದರ ಮನೆಯ ಅನುಭವ ನೀಡಿತು..!
ಎಂದು ಸುನೀತಾ ಇಲ್ಲಿನ ಶಾಲಾ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಅನುಭವ ಹಂಚಿಕೊಂಡರು.
`ನೀವು ಯಾವ ಕೆಲಸವನ್ನು ಇಷ್ಟಪಡುತ್ತೀರೋ, ಅದೇ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳಿ. ಖುಷಿಯಿಂದ ಕೆಲಸ ಮಾಡಿ' ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

`ಅನೇಕ ವಿಚಾರಗಳಲ್ಲಿ ಸೋತಿದ್ದ ನಾನು, ಮುಂದೊಂದು ದಿನ ಬಾಹ್ಯಾಕಾಶ ವಿಜ್ಞಾನಿಯಾಗುತ್ತೇನೆಂಬ ಕನಸು ಕಂಡಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳೇ, ನಿಮಗೆ ಯಾವುದು ಇಷ್ಟವಾಗುತ್ತದೋ ಆ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಿ. ಚೆನ್ನಾಗಿ ಅಭ್ಯಾಸ ಮಾಡಿ. ಮಾಡುವ ಕೆಲಸದಲ್ಲೇ ಖುಷಿಪಡಿ' ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಗಗನಯಾನದ ಅನುಭವಗಳನ್ನು ತೆರೆದಿಡುತ್ತಾ, ಬಾಹ್ಯಾಕಾಶದಲ್ಲಿರುವ ಕೌತುಕಗಳನ್ನು ಅನಾವರಣಗೊಳಿಸುವ ಜವಾಬ್ದಾರಿಯನ್ನು ಯುವ ಪೀಳಿಗೆಗೆ ವಹಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಬಾಹ್ಯಾಕಾಶದಿಂದ ಇಡೀ ಭಾರತವನ್ನು ನೋಡಿದ್ದ ಸುನೀತಾಗೆ ಭಾರತದ ಕೆಲವೊಂದು ಸ್ಥಳಗಳನ್ನು ನೋಡಬೇಕೆನಿಸಿದೆ. `ನನ್ನ ತಂದೆ ಗುಜರಾತ್‌ನ ಹಳ್ಳಿಯೊಂದರಿಂದ ಬಂದಿದ್ದರು. ನಾನು ಆ ಹಳ್ಳಿಗೆ ಭೇಟಿ ನೀಡುತ್ತಿದ್ದೇನೆ. ಆದರೆ, ಹಿಮಾಲಯ ಸೇರಿದಂತೆ ಪೂರ್ವ ಭಾರತವನ್ನು ನಾನು ನೋಡಿಲ್ಲ' ಎಂದಿದ್ದಾರೆ. 

47ರ ಹರೆಯದ ಸುನೀತಾ ವಿಲಿಯಮ್ಸ ಎರಡು ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡು 322 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲಸಿದ್ದರು. ಎರಡು ಯೋಜನೆಗಳಲ್ಲಿ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದರು. 50 ಗಂಟೆ 40 ನಿಮಿಷಗಳಷ್ಟು ಬಾಹ್ಯಾಕಾಶ ನಡಿಗೆ ಕೈಗೊಳ್ಳುವ ಮೂಲಕ ಅತಿ ಹೆಚ್ಚು   ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡ ವಿಶ್ವದ ಮೊದಲ ಮಹಿಳಾ ಗಗನಯಾತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊದಲ ಬಾಹ್ಯಾಕಾಶಯಾನದ ನಂತರ 2007ರಲ್ಲಿ ಸುನೀತಾ ಭಾರತಕ್ಕೆ ಭೇಟಿ ನೀಡಿದ್ದರು.

ಇಸ್ರೊಗೆ ಶ್ಲಾಘನೆ
ನವದೆಹಲಿ (ಐಎಎನ್‌ಎಸ್): `ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯರು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಪರಿಣತ ಸಂಪನ್ಮೂಲಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ' ಎಂದು  ಶ್ಲಾಘಿಸಿದ್ದಾರೆ.

ಮಕ್ಕಳೊಂದಿಗೆ ನಡೆಸ ಸಂವಾದದ ನಂತರ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, `ಭಾರತದ ಲೂನಾರ್ ಮಿಷನ್ (ಚಂದ್ರಯಾನ-1 ಮತ್ತು 2) ಮತ್ತು ಈ ವರ್ಷದ ಕೊನೆಯಲ್ಲಿ ಉಡಾವಣೆಯಾಗಲಿರುವ `ಮಂಗಳಯಾನ'ನದ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ.  ಕಲ್ಪನಾ ಚಾವ್ಲಾರಂಥ ಮತ್ತಷ್ಟು ಗಗನಯಾತ್ರಿಗಳನ್ನು ಭಾರತ ವಿಶ್ವಕ್ಕೆ ಕೊಡುಗೆಯಾಗಿ ನೀಡಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.