ADVERTISEMENT

ಬಾಪು ಊರಲ್ಲೂ `ಕ್ರಿಮಿನಲ್'ಗಳ ಅಬ್ಬರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಪೋರ್‌ಬಂದರ್: `ಕ್ರಿಮಿನಲ್ ಹಿನ್ನೆಲೆ' ನಾಯಕರ ರಾಜಕಾರಣ ನಂಟು ಅಪರೂಪವೇನಲ್ಲ. ಗುಜರಾತ್ ಚುನಾವಣೆಯಲ್ಲೂ ಇಂಥವರಿಗೆ ಅಭಾವವಿಲ್ಲ. ಕೊಲೆ, ಸುಲಿಗೆ ಆರೋಪ ಹೊತ್ತಿರುವ ಕರಾಳ ಜಗತ್ತಿನ `ದಾದಾ'ಗಳು ಹಾಗೂ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋಗಿ ಬಂದವರು ವಿಧಾನಸಭೆ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದೂ, ಸತ್ಯ- ಅಹಿಂಸೆಯನ್ನು ಅಸ್ತ್ರ ಮಾಡಿಕೊಂಡ ಮಹಾತ್ಮ ಗಾಂಧಿ ಹುಟ್ಟಿದ `ಪೋರ್‌ಬಂದರ್' ಇಂಥವರ ಅದೃಷ್ಟ ಪರೀಕ್ಷೆಗೆ ವೇದಿಕೆ ಆಗಿರುವುದು ವಿಪರ್ಯಾಸ.

ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋಗಿ ಬಂದಿರುವ ಬಾಬು ಬೊಖಾರಿಯಾ `ಪೋರ್‌ಬಂದರ್' ಬಿಜೆಪಿ ಅಭ್ಯರ್ಥಿ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಮೋಧ್ವಾಡಿಯಾ ಬೊಖಾರಿಯಾ ವಿರುದ್ಧ ಕಣದಲ್ಲಿದ್ದಾರೆ. ರಾಜೇಶ್ ಪಾಂಡ್ಯ ಜಿಪಿಪಿ ಅಭ್ಯರ್ಥಿ. ರಾಜಕಾರಣಿಗಳ ಬಗ್ಗೆ ಒಳ್ಳೆ ಮಾತುಗಳನ್ನು ಮತದಾರರು ಆಡುವುದು ಅಪರೂಪ. ಮೋಧ್ವಾಡಿಯಾ ಮಾತ್ರ ಇದಕ್ಕೆ ಅಪವಾದ.

ಪೋರ್‌ಬಂದರಿನ ಪ್ರತಿಯೊಬ್ಬರೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬಗೆಗೆ ಅತ್ಯಂತ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ. ಮೋಧ್ವಾಡಿಯಾ ಅವರಿಗೆ ಪೋರ್‌ಬಂದರಿನಿಂದ ಇದು ಮೂರನೇ ಚುನಾವಣೆ. ಹಿಂದಿನ ಎರಡು ಚುನಾವಣೆಗಳಲ್ಲೂ ಗೆದ್ದಿದ್ದಾರೆ. `ಇದುವರೆಗೆ ಪೋರ್‌ಬಂದರ್‌ನಲ್ಲಿ ಕೆಲಸಗಳನ್ನು ಮಾಡಿಲ್ಲ. ಅದಕ್ಕೆ ಬೇಸರವಿಲ್ಲ. 17 ವರ್ಷಗಳಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಶಾಸಕರು ಮೋದಿ ಸರ್ಕಾರದಲ್ಲಿ ಏನು ಕೆಲಸ ಮಾಡಲು ಸಾಧ್ಯ' ಎಂದು ಮತದಾರರು ಕೇಳುತ್ತಾರೆ.

ಪೋರ್‌ಬಂದರ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಮೋಧ್ವಾಡಿಯಾ ಅವರನ್ನು ಟೀಕಿಸಿದರೆ ಪ್ರಯೋಜನವಿಲ್ಲ. ಬಿಜೆಪಿ ಸರ್ಕಾರವೇ ಈ ಜಿಲ್ಲಾ ಕೇಂದ್ರವನ್ನು ಅಭಿವೃದ್ಧಿ ಪಡಿಸಬಹುದಿತ್ತು ಎಂಬುದು ದರಿನ ಜಿತೇಂದ್ರ ಅಭಿಪ್ರಾಯ. ಪೋರ್‌ಬಂದರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇಲ್ಲ. ದೇಶ- ವಿದೇಶಗಳಿಂದ ಜನ ಬರುತ್ತಾರೆ.  ಈ ಮಹಾತ್ಮನ ಊರನ್ನು ಸರ್ಕಾರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಿಲ್ಲ ಎಂಬ ಕೊರಗಿದೆ ಎಂದು ವಿದ್ಯಾರ್ಥಿ ಭರತ್ ಭಾಯ್ ವಿಷಾದಿಸುತ್ತಾರೆ.

ಎರಡು ದಶಕದ ಹಿಂದೆ ಪೋರ್ ಬಂದರ್‌ನಲ್ಲಿ ಸುಮಾರು ಹನ್ನೊಂದು ಭೂಗತ ಗ್ಯಾಂಗ್ ಕ್ರಿಯಾಶೀಲವಾಗಿದ್ದವು. ಹೊಡೆದಾಟ- ಬಡಿದಾಟ, ಕೊಲೆ-ಸುಲಿಗೆ ಮಾಮೂಲಿಯಾಗಿತ್ತು. ಇತ್ತೀಚೆಗೆ ಕಡಿಮೆ ಆಗಿದೆ. ಸಂಪೂರ್ಣವಾಗಿ ನಿಂತಿಲ್ಲ. ತೆರೆಮರೆಯಲ್ಲಿ ಹೆದರಿಸಿ- ಬೆದರಿಸಿ ಆಸ್ತಿ ವಿವಾದ ಬಗೆಹರಿಸುವ, ಅಕ್ರಮ ಶಸ್ತ್ರಾಸ್ತ್ರ ತಂದು ಮಾರಾಟ ಮಾಡುವ, ಹಣ ವಸೂಲಿಯ ಕಾಯಕ ನಡೆಯುತ್ತಿದೆ. 1996ರಲ್ಲಿ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿ ಆದ ಬಳಿಕ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪೋರ್‌ಬಂದರ್‌ಗೆ ಹಾಕಿ ಭೂಗತ ಜಗತ್ತಿನ ಚಟುವಟಿಕೆಯನ್ನು ಮಟ್ಟ ಹಾಕುವ ಪ್ರಯತ್ನ ಮಾಡಿದ್ದರು ಎಂದು ಸ್ಥಳೀಯರು ವಿವರಿಸುತ್ತಾರೆ.

ಒಂದು ಕಾಲಕ್ಕೆ ಬಂದೂಕಿನ ತುದಿಯಿಂದ ಪೋರ್‌ಬಂದರ್ ಆಳಿದ `ಗೂಂಡಾ ಮಹಿಳೆ'  ಸಂತೋಖ್ ಬೆನ್ ಪುತ್ರ ಕಂದಲ್ ಜಡೇಜ ಪಕ್ಕದ ಕುತಿಯಾನ ವಿಧಾನಸಭಾ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿ. ಕಾಂಗ್ರೆಸ್  ಮಿತ್ರ ಪಕ್ಷ ಎನ್‌ಸಿಪಿಗೆ ಬಿಟ್ಟುಕೊಟ್ಟಿರುವ 9 ವಿಧಾನಸಭಾ ಕ್ಷೇತ್ರಗಳಲ್ಲಿ ಇದೂ ಒಂದು. ಸಂತೋಖ್ ಇಲ್ಲಿಂದ ವಿಧಾನಸಭೆಗೆ 95ರಲ್ಲಿ ಆಯ್ಕೆ ಆಗಿದ್ದರು. ಇದಕ್ಕೂ ಮೊದಲು ತಾಲೂಕು ಪಂಚಾಯತಿಗೂ ಗೆದ್ದು ಬಂದಿದ್ದರು.

ಕಂದಲ್ ಜಡೇಜ ಮತದಾರರ ಮನ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಭೂಗತ ಚಟುವಟಿಕೆಯಿಂದ ದೂರವಿರುವುದಾಗಿ ಕ್ಷೇತ್ರದಲ್ಲಿ ಹೇಳುತ್ತಿದ್ದಾರೆ. ಆದರೆ, ಜನರಿಗೆ ಈ ಬಗ್ಗೆ ನಂಬಿಕೆ ಇದ್ದಂತಿಲ್ಲ. `ಜಡೇಜ ಎಲ್ಲವನ್ನು ಬಿಟ್ಟಿದ್ದಾರೆ ಎಂದು ಹೇಗೆ ನಂಬುವುದು ಎಂದು ಗೊತ್ತಿಲ್ಲ' ಎಂದು ನಿಲೇಶ್ ಮನೋಹರ್ ಅನುಮಾನ.

ಕುತಿಯಾನ ಜನರಿಗೆ ಹತ್ತಿರವಾಗಲು ಕಂದಲ್ ಪ್ರಯತ್ನಿಸುತ್ತಿದ್ದಾರೆ. ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಕಳೆದ ಮೂರು ಸಲ ಕುತಿಯಾನದಿಂದ ಬಿಜೆಪಿಯಿಂದ ಗೆದ್ದಿರುವ ಕರ್ಸನ್ ಒಡೆದರ ಏನೂ ಕೆಲಸ ಮಾಡಿಲ್ಲ ಎಂಬ ಕೊರಗು ಕ್ಷೇತ್ರದಲ್ಲಿ ಇದೆ. ಜಿಪಿಪಿ ಕುತಿಯಾನದಲ್ಲಿ ಹರಿರಬರಿ ಅವರನ್ನು ಕಣಕ್ಕಿಳಿಸಿದೆ. `ನಾವು ಒಡೆದರ ಅವರನ್ನು ನೋಡಿಕೊಂಡು ಮತದಾನದ ತೀರ್ಮಾನ ಮಾಡುವುದಿಲ್ಲ. ಒಡೆದರ ಏನೂ ಕೆಲಸ ಮಾಡಿಲ್ಲವೆಂಬುದು ಗೊತ್ತಿರುವ ಸತ್ಯ. ಆದರೆ, ಮೋದಿ ಅವರ ಕೆಲಸದ ಬಗ್ಗೆ ಯಾರ ಆಕ್ಷೇಪವೂ ಇಲ್ಲ ಎಂಬುದು ಮನೋಜ್ ಮಲ್ಕಿ ಹೇಳಿಕೆ.

ಕುತಿಯಾನ ಹತ್ತು ಸಾವಿರ ಜನಸಂಖ್ಯೆ ಇರುವ ಸಣ್ಣ ಪಟ್ಟಣ. ನೀರಿನ ಸಮಸ್ಯೆ ವಿಪರೀತವಾಗಿದೆ. ರಸ್ತೆಗಳು ಆಗಿಲ್ಲ. ಕುಡಿಯುವ ನೀರು ಹದಿನೈದು ದಿನಕ್ಕೊಮ್ಮೆ ಬರುತ್ತದೆ ಎಂಬುದು ಸ್ಥಳೀಯರ ಅಳಲು. ಪೋರ್‌ಬಂದರ್ ಜಿಲ್ಲೆಯಲ್ಲಿ ಕೃಷಿಯನ್ನು ಅವಲಂಬಿಸಿರುವ `ಮೆರ್' ಬಹುಸಂಖ್ಯಾತ ಸಮುದಾಯ. ಮೀನುಗಾರರ ಸಮುದಾಯವೂ ಇದೆ. ಪೋರ್ ಬಂದರ್ ಭೂಗತ ಜಗತ್ತನ್ನು ಇವೆರಡೂ ಸಮುದಾಯ  ಹಿಡಿತದಲ್ಲಿ ಇಟ್ಟುಕೊಂಡು ಬಂದಿವೆ. ಮಹಾತ್ಮ ಗಾಂಧಿ ಯಾವ ಮೌಲ್ಯಗಳಿಗಾಗಿ ಹೋರಾಡಿದ್ದರೋ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಪೋರ್‌ಬಂದರ್ ಸಾಗಿದೆ.

ಪೋರ್‌ಬಂದರ್ ಕ್ಷೇತ್ರ
ಬಾಬು ಬೊಖಾರಿಯಾ ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಅಭ್ಯರ್ಥಿ  ಮೋಧ್ವಾಡಿಯಾ


(ನಾಳಿನ ಸಂಚಿಕೆಯಲ್ಲಿ ಭಾಗ 8)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.