ADVERTISEMENT

ಬಾಬಾ ರಾಮ್‌ದೇವ್ ಮುಖಕ್ಕೆ ಮಸಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ನವದೆಹಲಿ (ಪಿಟಿಐ): ಬಾಬಾ ರಾಮ್‌ದೇವ್ ಮೇಲೆ ವ್ಯಕ್ತಿಯೊಬ್ಬ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಶಾಯಿ ಎರಚಿದ ಘಟನೆ ಶನಿವಾರ ನಡೆದಿದೆ.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಪ್ಪುಹಣದ ವಿರುದ್ಧ ತಾವು ರೂಪಿಸಿರುವ ಹೋರಾಟದ ಬಗ್ಗೆ ಮಾಹಿತಿ ನೀಡಲು ರಾಮ್‌ದೇವ್ `ಕಾನ್‌ಸ್ಟಿಟ್ಯೂಷನ್ ಕ್ಲಬ್~ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್‌ಸ್ವಾಮಿ ಅವರೂ ಗೋಷ್ಠಿಯಲ್ಲಿದ್ದರು.

ಶಾಯಿ ಎರಚಿ ದಾಳಿ ನಡೆಸಿದವನನ್ನು ದೆಹಲಿ ನಿವಾಸಿ ಕಮ್ರಾನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ `ರಿಯಲ್ ಕಾಸ್~ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದು, ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಬಗ್ಗೆ ದೂರು ನೀಡಿದ್ದವರಲ್ಲಿ ಈ ಸಂಸ್ಥೆಯೂ ಒಂದಾಗಿದೆ.

ರಾಮ್‌ದೇವ್ ಅವರ ಬಲಗಣ್ಣಿನ ಮೇಲೆ ಶಾಯಿ ಎರಚಿದ ಈತನನ್ನು ರಾಮ್‌ದೇವ್ ಬೆಂಬಲಿಗರು ಹಿಡಿದುಕೊಂಡು ಹಿಗ್ಗಾಮಗ್ಗಾ ಥಳಿಸಿದರು. ಇದರಿಂದಾಗಿ ಆತನ ಅಂಗಿ ಹರಿದು ಛಿದ್ರವಾಗಿ, ತುಟಿಯಿಂದ ರಕ್ತ ಸೋರಲು ಆರಂಭವಾಯಿತು. ಅಷ್ಟರಲ್ಲಿ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಆರೋಪಿ ವಾಕಿಟಾಕಿ ಹಿಡಿದು ಭದ್ರತಾ ಸಿಬ್ಬಂದಿಯಂತೆ ನಟಿಸುತ್ತ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಕ್ಲಬ್‌ಗೆ ಬಂದಿದ್ದ. ಆತನ ಬಳಿ ಆಸಿಡ್ ಸೀಸೆ ಕೂಡ ಇತ್ತು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮ್‌ದೇವ್ ಆಪ್ತ ಜೈದೀಪ್ ಹೇಳಿದ್ದಾರೆ.  ಈ ಘಟನೆನಂತರ ರಾಮ್‌ದೇವ್ ಕೂಡಲೇ ಪತ್ರಿಕಾಗೋಷ್ಠಿ ಬರ್ಖಾಸ್ತುಗೊಳಿಸಿದರು. ಅವರನ್ನು ಪೊಲೀಸರ ಬೆಂಗಾವಲಿನಲ್ಲಿ ಕ್ಲಬ್‌ನಿಂದ ಕರೆದುಕೊಂಡು ಹೋಗುವಾಗ ನೂಕುನುಗ್ಗುಲು ಉಂಟಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್‌ದೇವ್, `ಇಂತಹ ಘಟನೆಗಳಿಂದ ವಿಚಲಿತಗೊಳ್ಳುವುದಿಲ್ಲ; ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲದು~ ಎಂದರು.

ಶಾಯಿ ಎರಚುವುದಕ್ಕೂ ಮುನ್ನ ಸಿದ್ದಿಕಿ 2008ರ ನಡೆದ ಬಾತ್ಲಾ ಹೌಸ್ ಎನ್‌ಕೌಂಟರ್ ಬಗ್ಗೆ ರಾಮ್‌ದೇವ್ ಅವರನ್ನು ಪ್ರಶ್ನಿಸಿದ. ಇದನ್ನು ರಾಮ್‌ದೇವ್ ನಿರ್ಲಕ್ಷಿಸಿದರು. ಮರು ಕ್ಷಣವೇ ಆತ ಅವರ ಮೇಲೆ ಶಾಯಿ ಎರಚಿದ.

ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ದಾಳಿ ಸಂಚುಕೋರರು ಬಾತ್ಲಾ ಹೌಸ್‌ನಲ್ಲಿ ಅಡಗಿರಬಹುದು ಎಂಬ ಮಾಹಿತಿ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಅಲ್ಲಿದ್ದವರೆಲ್ಲಾ ಹತ್ಯೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.