ADVERTISEMENT

ಬಿಎಸ್‌ವೈ: ಸಿಇಸಿ ಶಿಫಾರಸುಗಳ ಬಗ್ಗೆ 23ರ ನಂತರ ಸುಪ್ರೀಂ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ನವದೆಹಲಿ: ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿರುವ ವಿಶೇಷ ಮೇಲ್ಮನವಿ ವಿಚಾರಣೆ ನಂತರ ಸಿಇಸಿ ವರದಿಯ ಶಿಫಾರಸುಗಳ ಬಗ್ಗೆ ಗಮನಹರಿಸುವ ಇಂಗಿತವನ್ನು ಸುಪ್ರೀಂಕೋರ್ಟ್‌ನ ಅರಣ್ಯ ಪೀಠ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಸ್ವತಂತ್ರಕುಮಾರ್ ಅವರಿದ್ದ ಅರಣ್ಯ ಪೀಠಕ್ಕೆ ಸಿಇಸಿ ವರದಿ ಸಲ್ಲಿಸಿತು. ಈ ವರದಿ ಆಧರಿಸಿ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವಂತೆ ಹಿರೇಮಠ ಅವರ ಪರ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದರೆ, ಭೂಷಣ್ ಅವರ ಮನವಿಯಂತೆ ತಕ್ಷಣ ಆದೇಶ ಹೊರಡಿಸಲು ನಿರಾಕರಿಸಿದ ನ್ಯಾಯಪೀಠ, `ಹೈಕೋರ್ಟ್ ತೀರ್ಪು ಪ್ರಶ್ನಿಸಿರುವ ವಿಶೇಷ ಮೇಲ್ಮನವಿ ಸೋಮವಾರ ವಿಚಾರಣೆಗೆ ಬರಲಿದೆ~ ಎಂದಷ್ಟೇ ತಿಳಿಸಿತು. 
 
ಅರಣ್ಯ ಪೀಠವು ಗಣಿಗಾರಿಕೆ ಪ್ರದೇಶದ ಪರಿಹಾರ ಮತ್ತು ಪುನರ್ವಸತಿ ವಿಷಯಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತದೆ ಎಂಬ ನೋಟಿಸ್ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಿಂದ ಶುಕ್ರವಾರ ಪ್ರಕಟವಾಗಿತ್ತು. ಶುಕ್ರವಾರ ಪರಿಹಾರ ಮತ್ತು ಪುನರ್ವಸತಿಗೆ ಸಂಬಂಧಿಸಿದ ವಿಷಯಗಳ ವಿಚಾರಣೆಯನ್ನು ಮಾತ್ರ ನಡೆಸಲಾಗುತ್ತದೆ ಎಂಬ ಉಲ್ಲೇಖ ಈ ನೋಟಿಸ್‌ನಲ್ಲಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.