ನವದೆಹಲಿ (ಪಿಟಿಐ): ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಸುಳಿವು ನೀಡಿದ ಬೆನ್ನಲ್ಲಿಯೇ, ಇದೀಗ ಪಕ್ಷದ ಮುಖವಾಣಿ `ಕಮಲ ಸಂದೇಶ~ದಲ್ಲಿಯೂ ಆಂತರಿಕ ಕಲಹ ಹಾಗೂ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಆತಂಕ ವ್ಯಕ್ತವಾಗಿದೆ.
ಆದರೆ ಪಕ್ಷದಲ್ಲಿ ನಾಯಕತ್ವ ಬಿಕ್ಕಟ್ಟು ಎದುರಾಗಿದೆ ಎನ್ನಲಾದ ವರದಿಯನ್ನು ಬಿಜೆಪಿ ಅಲ್ಲಗಳೆದಿದೆ. `ಹುರುಳಿಲ್ಲದ ಕಥೆ ಕಟ್ಟುವುದು ಸರಿಯಲ್ಲ~ ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಅವರು ಪ್ರತಿಕ್ರಿಯಿಸಿದ್ದಾರೆ.
`ಕಮಲ ಸಂದೇಶ~ದ ಸಂಪಾದಕೀಯದಲ್ಲಿ, ಬಿಜೆಪಿ ಆಡಳಿತ ಇರುವ ಕರ್ನಾಟಕ, ಗುಜರಾತ್ ಹಾಗೂ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಜಸ್ತಾನ ರಾಜ್ಯಗಳಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಲಾಗಿದೆ.
`ಈ ರಾಜ್ಯಗಳಲ್ಲಿನ ಕೆಲವು ವಿದ್ಯಮಾನಗಳು ಜನರ ಭಾವನೆಗಳನ್ನು ನೋಯಿಸಿವೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೂಡ ನೊಂದುಕೊಂಡಿದ್ದಾರೆ~ ಎಂದು ಹೇಳಲಾಗಿದೆ.
`ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಂಡಾಯದ ಬಾವುಟ ಹಾರಿಸಿ, ತಮ್ಮನ್ನು ಮುಖ್ಯಮಂತ್ರಿ ಗಾದಿ ಮೇಲೆ ಮತ್ತೆ ಪ್ರತಿಷ್ಠಾಪಿಸುವಂತೆ ದುಂಬಾಲು ಬಿದ್ದಿದ್ದಾರೆ. ಇನ್ನು ಗುಜರಾತ್‌ನಲ್ಲಿ ಕೇಶುಭಾಯ್ ಪಟೇಲ್ ಹಾಗೂ ಸುರೇಶ್ ಮೆಹ್ತಾ ಅವರಂಥ ನಾಯಕರು ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ರಾಜಸ್ತಾನದಲ್ಲಿ ಕೂಡ ಎಲ್ಲವೂ ಸರಿಯಾಗಿಲ್ಲ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಅವರ ಬೆಂಬಲಿಗರು ಸ್ಥಳೀಯ ಮುಖಂಡ ಗುಲಾಬ್‌ಚಂದ್ ಕಟಾರಿಯಾ ಅವರ ಯಾತ್ರೆ ಯೋಜನೆಯನ್ನು ಆಕ್ಷೇಪಿಸ್ದ್ದಿದರು. ಯಾತ್ರೆಗೆ ಗಡ್ಕರಿ ಹಾಗೂ ಆರ್‌ಎಸ್‌ಎಸ್‌ನಿಂದ ಬೆಂಬಲ ಇತ್ತು ಎನ್ನಲಾದರೂ ಕಟಾರಿಯಾ ಅದನ್ನು ಕೈಬಿಡಬೇಕಾಯಿತು~.
`ತರಗತಿಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದಕ್ಕೊಂದು ಅರ್ಥವಿದೆ. ಆದರೆ ಶಿಕ್ಷಕರು ಹಾಗೂ ಪ್ರಾಂಶುಪಾಲರೇ ಹಾದಿ ಬಿಟ್ಟು ಹೋಗಲು ಮುಂದಾದರೆ ಹೇಗೆ?, ಮುಖಂಡರು ತಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿದ ಸಂಘಟನೆಯನ್ನು ಮರೆಯಕೂಡದು~ ಎಂದು ಸಂಪಾದಕೀಯ ಹೇಳಿದೆ.
ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಉಲ್ಲೇಖಿಸುತ್ತಾ `ಪಕ್ಷದಲ್ಲಿ ಕೆಲವು ಮುಖಂಡರು ಉನ್ನತ ಸ್ಥಾನ ಪಡೆಯುವುದಕ್ಕೆ ತರಾತುರಿಯಲ್ಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಪಕ್ಷಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಜನದಟ್ಟಣೆಯ ಸಂದರ್ಭದಲ್ಲಿ ಅವಸರದ ಪ್ರಯಾಣಿಕ ಕೂಡ ಇನ್ನೊಂದು ರೈಲಿಗೆ ಕಾಯಬೇಕಾಗುತ್ತದೆ~ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.