ADVERTISEMENT

ಬಿಕ್ಕಟ್ಟಿನಿಂದ ಬಿಕ್ಕಟ್ಟಿನೆಡೆಗೆ

ಮತ್ತೆ ಆರು ದಿನ 6 ಸಾವಿರ ಕ್ಯೂಸೆಕ್‌ ನೀರು ಬಿಡಲು ಆದೇಶ; ಅಕ್ಟೋಬರ್‌ 4ರೊಳಗೆ ನೀರು ನಿರ್ವಹಣಾ ಮಂಡಳಿ ರಚನೆಗೆ ‘ಸುಪ್ರೀಂ’ ಕಟ್ಟಾಜ್ಞೆ

ಸಿದ್ದಯ್ಯ ಹಿರೇಮಠ
Published 30 ಸೆಪ್ಟೆಂಬರ್ 2016, 20:14 IST
Last Updated 30 ಸೆಪ್ಟೆಂಬರ್ 2016, 20:14 IST
ಬಿಕ್ಕಟ್ಟಿನಿಂದ ಬಿಕ್ಕಟ್ಟಿನೆಡೆಗೆ
ಬಿಕ್ಕಟ್ಟಿನಿಂದ ಬಿಕ್ಕಟ್ಟಿನೆಡೆಗೆ   

ನವದೆಹಲಿ: ನಾಲ್ಕು ದಿನಗಳೊಳಗೆ ನಿರ್ವಹಣಾ ಮಂಡಳಿ ಸ್ಥಾಪಿಸಿ, ವಸ್ತುಸ್ಥಿತಿ ಅರಿಯುವ ಮೂಲಕ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಸೂಚಿಸುವಂತೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌, ಆರು ದಿನಗಳ ಕಾಲ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಮತ್ತೆ ಆದೇಶಿಸಿತು.

ನ್ಯಾಯಾಲಯದ ವ್ಯಾಪ್ತಿಯ ಹೊರಗೆ ನೀರು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಕಾರಣ, ‘ಕಾವೇರಿ ನಿರ್ವಹಣಾ ಮಂಡಳಿಯೇ ಅದಕ್ಕೆ ಸೂಕ್ತ’ ಎಂಬ ತೀರ್ಮಾನಕ್ಕೆ ಬಂದ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಉದಯ್‌ ಲಲಿತ್‌ ಅವರ ಪೀಠ, ‘ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ ಪಾಲಿಸದಿರುವ ಕರ್ನಾಟಕಕ್ಕೆ ಇದು ಕೊನೆಯ ಅವಕಾಶ’  ಎಂಬ ಎಚ್ಚರಿಕೆ ನೀಡಿ, ಅಕ್ಟೋಬರ್‌ 6ಕ್ಕೆ ವಿಚಾರಣೆ ಮುಂದೂಡಿತು.

‘ಏಳು ದಿನಗಳ ಕಾಲ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಸೆ. 20ರಂದು ನೀಡಿದ್ದ ಆದೇಶವನ್ನು ಪಾಲಿಸದ ಕರ್ನಾಟಕ, ಮೂರು ದಿನ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಸೆ. 27ರಂದು ನೀಡಿದ್ದ ಆದೇಶವನ್ನೂ ಉಲ್ಲಂಘಿಸಿದೆ. ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕವು, ನಿರ್ವಹಣಾ ಮಂಡಳಿಯು ಅಧ್ಯಯನ ನಡೆಸಿ ವರದಿ ಸಲ್ಲಿಸುವವರೆಗೆ ಮತ್ತೆ ಆದೇಶವನ್ನು ಉಲ್ಲಂಘಿಸುವುದಿಲ್ಲ ಎಂದು ಭಾವಿಸಲಾಗಿದೆ.

ಶಾಸನಸಭೆ ಸೆಪ್ಟೆಂಬರ್‌ 23ರಂದು ಕೈಗೊಂಡಿರುವ ನಿರ್ಣಯವನ್ನು ಬದಿಗಿರಿಸಿ ನೀರು ಹರಿಸಲೇಬೇಕು ಎಂದು ನ್ಯಾಯಪೀಠ ಸೂಚಿಸಿತು.

ಸಂವಿಧಾನದ 144ನೇ ಕಲಮಿನ ಪ್ರಕಾರ ಯಾವುದೇ ಖಾಸಗಿ, ಸರ್ಕಾರಿ  ಸಂಸ್ಥೆಯಾಗಲಿ, ನ್ಯಾಯಾಂಗದ ಅಂಗ ಸಂಸ್ಥೆಯೇ ಆಗಲಿ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧವಾಗಿರುವುದು ಕಡ್ಡಾಯ. ಆದರೆ, ಕರ್ನಾಟಕವು ಒಂದು ರಾಜ್ಯವಾಗಿ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತಂದಿರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅಭಿಪ್ರಾಯಪಟ್ಟರು.

‘ಕೊರ್ಟ್‌ ನೀಡಿದ ಯಾವುದೇ ಆದೇಶದ ಬಗ್ಗೆ ನಾವು ಇದುವರೆಗೆ ಚಕಾರ ಎತ್ತಿಲ್ಲ. ಆದರೆ, ಕರ್ನಾಟಕವು ಎಲ್ಲ ಆದೇಶಗಳನ್ನೂ ಧಿಕ್ಕರಿಸುವ ಮೂಲಕ ನಮ್ಮನ್ನು ನಿಕೃಷ್ಟವಾಗಿ ನಡೆಸಿಕೊಂಡಿತು’ ಎಂದೂ ಇದೇ ವೇಳೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ ನೋವು ತೋಡಿಕೊಂಡರು.

ತ್ವರಿತ ಕ್ರಮಕ್ಕೆ ಸೂಚನೆ: ಕಾವೇರಿ ನಿರ್ವಹಣಾ ಮಂಡಳಿಗೆ ಶನಿವಾರ ಮಧ್ಯಾಹ್ನ 4ಗಂಟೆಯೊಳಗೆ ಅಧಿಕಾರಿಗಳನ್ನು ನೇಮಿಸಬೇಕು. ಕಾವೇರಿ ಕಣಿವೆಯ ವಾಸ್ತವ ಸ್ಥಿತಿ ಅರಿಯುವ ಮೂಲಕ ಮಂಡಳಿಯು ಅಕ್ಟೋಬರ್‌ 4ರೊಳಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನ ಮೇರೆಗೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಗುರುವಾರ ಕರ್ನಾಟಕದ ಮುಖ್ಯಮಂತ್ರಿ ಮತ್ತು ತಮಿಳುನಾಡಿನ ಲೋಕೋಪಯೋಗಿ ಸಚಿವರ ಸಂಧಾನ ಸಭೆ ನಡೆಸಿದರೂ ಪರಿಹಾರ ಸಾಧ್ಯವಾಗಲಿಲ್ಲ ಎಂಬ ವಿಷಯವನ್ನು ಕೋರ್ಟ್‌ಗೆ ತಿಳಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ, ನ್ಯಾಯಮಂಡಳಿ ಆದೇಶದಂತೆ ಮಂಡಳಿ ಸ್ಥಾಪಿಸುವಂತೆ ಕೋರ್ಟ್‌ ನೀಡಿದ ಸಲಹೆಗೆ ಸಮ್ಮತಿ ಸೂಚಿಸಿದರು.

ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಸೂಚಿಸಿ ಸೆ. 20ರಂದು ನಾಲ್ಕು ವಾರಗಳ ಗುಡುವು ನೀಡಿದ್ದ ನ್ಯಾಯಪೀಠ, ಈಗ ಆ ಗಡುವನ್ನು ಮೊಟಕುಗೊಳಿಸಿ ಕೇವಲ ನಾಲ್ಕು ದಿನಗಳ ಕಾಲಾವಕಾಶ ನೀಡಿದೆ.

ಒಂದೇ ದಿನದಲ್ಲಿ ಮಂಡಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಸರ್ಕಾರಗಳು ಮಂಡಳಿಯಲ್ಲಿ ಕಾರ್ಯ ನಿರ್ವಹಿಬೇಕಿರುವ ತಮ್ಮ ಸದಸ್ಯರನ್ನು ಕೂಡಲೇ ನೇಮಿಸಬೇಕು. ಕೇಂದ್ರದ ಜಲಸಂಪನ್ಮೂಲ ಸಚಿವಾಲಯವೂ ಅಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿತು.

ಮರು ಪರಿಶೀಲನಾ ಅರ್ಜಿ ಇಂದು
ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಹಾಗೂ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್‌ ಸೆ. 20 ಮತ್ತು 30ರಂದು ನೀಡಿರುವ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಕರ್ನಾಟಕ ಶನಿವಾರ ಅರ್ಜಿ ಸಲ್ಲಿಸಲಿದೆ.

ಒಂದೊಮ್ಮೆ ನ್ಯಾಯಮೂರ್ತಿಗಳು ಈ ಅರ್ಜಿಯನ್ನು ತಿರಸ್ಕರಿಸಿದಲ್ಲಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಕ್ಯುರೇಟಿವ್‌ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದಲ್ಲಿ ಮಂಡಳಿ ರಚನೆಗೆ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ  ಕರ್ನಾಟಕವು ಸುಪ್ರೀಂ ಕೋರ್ಟ್‌ ಸೂಚನೆಯಂತೆ ಶನಿವಾರ ಮಧ್ಯಾಹ್ನ 4ರೊಳಗೆ ಮಂಡಳಿಗೆ ತನ್ನ ಸದಸ್ಯ ಪ್ರತಿನಿಧಿಯನ್ನು ನೇಮಿಸುವ ಸಾಧ್ಯತೆಗಳು ಕಡಿಮೆ ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಮಳೆಯ ಆರ್ಭಟ
ಚೆನ್ನೈ: 
ಬಂಗಾಳ ಕೊಲ್ಲಿಯಲ್ಲಿ ಸಾಗರ ಮೇಲ್ಮೈ ಗಾಳಿಯು ತೀವ್ರತೆ ಪಡೆದುಕೊಂಡ ಕಾರಣ ಗುರುವಾರ ರಾತ್ರಿಯಿಂದ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಗರ ಮೇಲ್ಮಟ್ಟದಿಂದ 5.8 ಕಿ.ಮೀ.ನಿಂದ 9.5 ಕಿ.ಮೀ ಎತ್ತರದಲ್ಲಿ ಗಾಳಿಯ ತೀವ್ರತೆ ಕೇಂದ್ರೀಕೃತವಾಗಿದೆ.  ಇದರ ಪ್ರಭಾವದಿಂದಾಗಿ ತಂಜಾವೂರು, ತಿರುವರೂರು ಮೊದಲಾದ  ಕಾವೇರಿ ನದಿಪಾತ್ರದ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸುರಿಯಲಿದೆ ಎಂದು ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT