ADVERTISEMENT

ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಅಖಿಲೇಶ್‌ ಭಾವಚಿತ್ರವಿರುವ ಶಾಲಾ ಬ್ಯಾಗ್‌ ವಿತರಣೆ!

ಏಜೆನ್ಸೀಸ್
Published 14 ಜೂನ್ 2017, 6:33 IST
Last Updated 14 ಜೂನ್ 2017, 6:33 IST
ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಅಖಿಲೇಶ್‌ ಭಾವಚಿತ್ರವಿರುವ ಶಾಲಾ ಬ್ಯಾಗ್‌ ವಿತರಣೆ!
ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಅಖಿಲೇಶ್‌ ಭಾವಚಿತ್ರವಿರುವ ಶಾಲಾ ಬ್ಯಾಗ್‌ ವಿತರಣೆ!   

ಅಹಮದಾಬಾದ್: ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್‌ ಅವರು ಅಧಿಕಾರದಲ್ಲಿಲ್ಲ. ಆದರೆ, ಅವರು ಬಿಜೆಪಿ ಆಡಳಿತವಿರುವ ಗುಜರಾತ್‌ನ ಛೋಟಾ ಉಡಿಪುರ ಜಿಲ್ಲೆಯಲ್ಲಿ ಸುದ್ದಿಯಲ್ಲಿದ್ದಾರೆ.

ಬುಡಕಟ್ಟು ಪ್ರಾಬಲ್ಯವಿರುವ ಈ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರ ಭಾವಚಿತ್ರವಿರುವ 12 ಸಾವಿರ ಶಾಲಾ ಚೀಲ(ಸ್ಕೂಲ್‌ ಬ್ಯಾಗ್)ಗಳನ್ನು ವಿತರಿಸಲಾಗಿದೆ. ಈ ಸಂಬಂಧ ರಾಜ್ಯ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.

ಶಾಲಾ ಚೀಲಗಳನ್ನು ಗುಜರಾತ್‌ ಸರ್ಕಾರ ಶಾಲಾ ದಾಖಲಾತಿ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ನಡೆಯುವ ‘ಶಾಲಾ ಪ್ರವೇಶೋತ್ಸವ’ ಕಾರ್ಯಕ್ರಮದಡಿ ಒಂದನೇ ತರಗತಿ ವಿದ್ಯಾರ್ಥಿಗಳ ಸೇರ್ಪಡೆ ವೇಳೆ ವಿತರಿಸಲಾಗಿದೆ. ಈ ಬ್ಯಾಗ್‌ಗಳು ಅಖಿಲೇಶ್‌ ಯಾದವ್‌ ಅವರ ಭಾವಚಿತ್ರ ಒಳಗೊಂಡಿದ್ದವು. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ADVERTISEMENT

ವಾಸೆಡಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ‘ಜಿಲ್ಲಾ ಪಂಚಾಯತ್‌ ಶಾಲಾ ಪ್ರವೇಶೋತ್ಸವ’ ಕಾರ್ಯಕ್ರಮದಲ್ಲಿ ಅಖಿಲೇಶ್‌ ಯಾದವ್‌ ಅವರ ಭಾವಚಿತ್ರ ಹೊಂದಿರುವ ಬ್ಯಾಗ್‌ಗಳನ್ನು ಶಿಕ್ಷಕರು ಮೊದಲು ನೋಡಿದ್ದಾರೆ.

ಜಿಲ್ಲಾ ಪಂಚಾಯ್ತಿ ವತಿಯಿಂದ ಇ–ಟೆಂಡರ್‌ ಮೂಲಕ ಸೂರತ್‌ ಮೂಲಕ ಕಂಪೆನಿಯಿಂದ ಬ್ಯಾಗ್‌ಗಳನ್ನು ಖರೀದಿಸಲಾಗಿತ್ತು ಎಂದು ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಅಧಿಕಾರಿ ಮಹೇಶ್ ಪ್ರಜಾಪತಿ ಹೇಳಿದ್ದಾರೆ.

‘ಜವಾಬ್ದಾರಿ ನಿರ್ವಹಣೆಯಲ್ಲಿ ಆಗಿರುವ ಲೋಪದ ವಿರುದ್ಧ ತನಿಖೆ ನಡೆಸಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು‘ ಎಂದು ರಾಜ್ಯ ಶಿಕ್ಷಣ ಸಚಿವ ಭೂಪೇಂದ್ರಸಾ ಚುದಾಸಾಮ ಅವರು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ವಿತರಣೆಗಾಗಿ ಈ ಬ್ಯಾಗ್‌ಗಳನ್ನು ತಯಾರಿಸಲಾಗಿತ್ತು.

ಇದೇ ಅವಕಾಶವನ್ನು ಬಳಸಿಕೊಂಡಿರುವ ವಿರೋಧ ಪಕ್ಷ ಕಾಂಗ್ರೆಸ್‌, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಉತ್ತರ ಪ್ರದೇಶದ ಹಿಂದಿನ ಸರ್ಕಾರದ ಚೀಲಗಳನ್ನು ಮರುಬಳಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಶಾಲಾ ಪ್ರವೇಶೋತ್ಸವ ನಡೆಸಿ ವಿತರಣೆ ಮಾಡುತ್ತಿದೆ. ಇದು ಸರ್ಕಾರ ಶಿಕ್ಷಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ತೋರುತ್ತದೆ’ ಎಂದು ಗುಜರಾತ್‌ ಕಾಂಗ್ರೆಸ್‌ ವಕ್ತಾರ ಮನಿಷ್‌ ದೋಶಿ ಅವರು ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.