ADVERTISEMENT

ಬಿಜೆಪಿ ವಿರುದ್ಧ ಕಾಂಗ್ರೆಸ್ಸೇತರ ರಂಗಕ್ಕೆ ಮಮತಾ ಸಜ್ಜು?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ನವದೆಹಲಿ: ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮುಂದುವರಿಸಿದ್ದಾರೆ. ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರನ್ನು ಅವರು ಸಂಪರ್ಕಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್‌. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಜತೆಗೆ ಮಮತಾ ಇತ್ತೀಚೆಗೆ ಮಾತನಾಡಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್ಸೇತರ ವೇದಿಕೆಯೊಂದನ್ನು ಕಟ್ಟುವ ಬಗ್ಗೆ ರಾವ್‌ ಅವರು ಸಹಮತ ವ್ಯಕ್ತಪಡಿಸಿದ್ದರು. ತೃಣಮೂಲ ಕಾಂಗ್ರೆಸ್‌ ಜತೆಗೆ ಸಂಪರ್ಕದಲ್ಲಿರುವುದಾಗಿ ಸ್ಟಾಲಿನ್‌ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಸಂಸತ್ತಿನಲ್ಲಿ ಮತ್ತು ಹೊರಗೆ ವಿರೋಧ ಪಕ್ಷಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಮಮತಾ ಹೇಳಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನೂ ಮಮತಾ ಇತ್ತೀಚೆಗೆ ಸಂಪರ್ಕಿಸಿದ್ದಾರೆ.

ADVERTISEMENT

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಿಟ್ಟು ಏಕಾಂಗಿಯಾಗಿ ಸ್ಪರ್ಧಿಸಲು ಸೇನಾ ನಿರ್ಧರಿಸಿದೆ. ಟಿಎಂಸಿ, ಡಿಎಂಕೆ, ಟಿಆರ್‌ಎಸ್‌, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಜತೆಯಾಗಿ ಕನಿಷ್ಠ 75 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಮಮತಾ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಹೀಗಿದ್ದರೂ ಕಾಂಗ್ರೆಸ್‌ ಜತೆಗೆ ಮಮತಾ ಅವರ ಸಂಬಂಧ ಚೆನ್ನಾಗಿಯೇ ಇದೆ. ಅದಲ್ಲದೆ, ಕಾಂಗ್ರೆಸ್ಸನ್ನು ಬಿಟ್ಟು ಪ್ರತ್ಯೇಕ ರಂಗ ನಿರ್ಮಿಸುವ ಬಗ್ಗೆ ಟಿಎಂಸಿಯ ಹಿರಿಯ ಮುಖಂಡರಲ್ಲಿ ಸಹಮತ ಇಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.