ADVERTISEMENT

ಬಿದರಿ ನೇಮಕ ವಿವಾದ: ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ: ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ಶಂಕರ ಎಂ.ಬಿದರಿ ಅವರ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರ, ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದೆ. 

ನ್ಯಾಯಾಲಯದ ಆದೇಶ ಮತ್ತು ನೇಮಕಾತಿ ನಿಯಮಾವಳಿ ಉಲ್ಲಂಘಿಸಿ ಬಿದರಿ ಅವರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೇಮಕ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ ಭಾರತೀಯ ಲೋಕಸೇವಾ ಆಯೋಗಕ್ಕೂ (ಯುಪಿಎಸ್‌ಸಿ) ನ್ಯಾಯಾಲಯ ಇದೇ ವೇಳೆ ಕಿವಿ ಹಿಂಡಿದೆ.

ಪೊಲೀಸ್ ಆಡಳಿತ ಸುಧಾರಣೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2006ರಲ್ಲಿ `ಎರಡು ವರ್ಷಗಳ ಕಡ್ಡಾಯ ಸೇವಾವಧಿ~ ಆದೇಶ ನೀಡಿತ್ತು. ಆದರೆ, ಡಿಜಿಪಿ ಹುದ್ದೆಗೆ ಬಿದರಿ ಅವರನ್ನು ನೇಮಕ ಮಾಡುವಾಗ ಈ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಅಫ್ತಾಬ್ ಆಲಂ ಮತ್ತು ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ಪೀಠ ತರಾಟೆಗೆ ತೆಗೆದುಕೊಂಡಿತು.

ಡಿಜಿಪಿ ನೇಮಕ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮತ್ತು ಯುಪಿಎಸ್‌ಸಿ ಕೈಗೊಂಡಿರುವ ನಿರ್ಧಾರ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರ ನಿಜಕ್ಕೂ ತಮಗೆ ತೃಪ್ತಿ ತಂದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಗಾಳಿಗೆ ತೂರಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯ ನೇತೃತ್ವದ ವಿಶೇಷ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದರು.

ತಮ್ಮ ಸ್ಥಾನಕ್ಕೆ ಎ.ಆರ್. ಇನ್ಫಂಟ್ ಅವರನ್ನು ನೇಮಕ ಮಾಡಿ ಮಾರ್ಚ್ 30ರಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಬಿದರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 24ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ, ಯುಪಿಎಸ್‌ಸಿ ಮತ್ತು ಡಿಜಿಪಿ ಎ.ಆರ್.ಇನ್ಫಂಟ್ ಅವರಿಂದಲೂ ನ್ಯಾಯಾಲಯ ವಿವರಣೆ ಕೇಳಿದೆ.

ಸರ್ಕಾರದ ಪರ ವಾದ ಮಂಡಿಸಿದ ಉದಯ್ ಯು. ಲಲಿತ್, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ಅವರ ಸಲಹೆ ಪಡೆದ ನಂತರವೇ ಬಿದರಿ ಅವರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಪೊಲೀಸ್ ಆಡಳಿತ ಸುಧಾರಣೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2006ರಲ್ಲಿ ನೀಡಿದ `2 ವರ್ಷಗಳ ಕಡ್ಡಾಯ  ಸೇವಾವಧಿ~ ಆದೇಶ ಪಾಲನೆ ಅಸಾಧ್ಯ ಎಂದು ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ ಎಂಬ ವಿಷಯವನ್ನು ಉದಯ್ ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಅವರ ಈ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು, ನ್ಯಾಯಾಲಯದ ಆದೇಶ ಸ್ಪಷ್ಟವಾಗಿದ್ದು, ಅದನ್ನು ಪಾಲಿಸದೆ ಅನ್ಯ ಮಾರ್ಗವಿಲ್ಲ ಎಂದರು.
ಯುಪಿಎಸ್‌ಸಿ ಪರವಾಗಿ ವಾದ ಮಂಡಿಸುತ್ತಿರುವ ಬಿನು ತಮ್ಟಾ, ಎರಡು ವರ್ಷಗಳ ಸೇವಾವಧಿ ಕಡ್ಡಾಯ ನಿಯಮಾವಳಿ ಸಡಿಲಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅನುಮತಿ ಪಡೆಯಲಾಗಿದೆಯೇ ಎಂದು ಯುಪಿಎಸ್‌ಸಿ ವಿವರ ಕೋರಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು, ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ವಿವರಣೆ ನೀಡಿದರು.

ಪ್ರಕರಣದ ಹಿನ್ನೆಲೆ
ರಾಜ್ಯದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಪೈಕಿ ಒಬ್ಬರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡಬಹುದು ಎಂದು 2010ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ನೀಲಂ ಅಚ್ಯುತರಾವ್ ಅವರು ಎರಡು ವರ್ಷ ಅವಧಿ ಪೂರೈಸುವ ಮೊದಲೇ 2011ರಲ್ಲಿ ಬಿದರಿ ಅವರನ್ನು ರಾಜ್ಯ ಸರ್ಕಾರ ಡಿಜಿಪಿ ಹುದ್ದೆಗೆ ನೇಮಕ ಮಾಡಿತ್ತು.
ಇದನ್ನು ಇನ್ಫಂಟ್ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಸಿಎಟಿ) ಪ್ರಶ್ನಿಸಿದ್ದರು. ಸಿಎಟಿ ಇನ್ಫಂಟ್ ಪರ ತೀರ್ಪು ನೀಡಿತ್ತು. ಸಿಎಟಿ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಬಿದರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಸಿಎಟಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್, ಇನ್ಫಂಟ್ ಅವರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡಿತ್ತು.

ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಪಡೆಯ ನೇತೃತ್ವ ವಹಿಸಿದ್ದ ಬಿದರಿ ಅವರ ಮೇಲೆ ಬುಡಕಟ್ಟ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಇತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಬಿದರಿ ಅವರನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಅವರು ಸರ್ವಾಧಿಕಾರಿಗಳಾದ ಸದ್ದಾಂ ಹುಸೇನ್ ಮತ್ತು ಮೊಹಮ್ಮದ್ ಗಡಾಫಿ ಅವರಿಗಿಂತಲೂ ಕಡೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT