ADVERTISEMENT

‘ಬಿಳಿಯನ ಮುಂದೆ ಬೆತ್ತಲಾಗುತ್ತೇವೆ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಅಲ್ಫೋನ್ಸ್‌ ಕಣ್ಣಂತಾನಂ (ಸಂಗ್ರಹ ಚಿತ್ರ).
ಅಲ್ಫೋನ್ಸ್‌ ಕಣ್ಣಂತಾನಂ (ಸಂಗ್ರಹ ಚಿತ್ರ).   

ತಿರುವನಂತಪುರ: ‘ಅಮೆರಿಕದ ವೀಸಾ ಪಡೆಯುವುದಕ್ಕಾಗಿ ನಾವು ಬೆರಳಚ್ಚು ನೀಡುತ್ತೇವೆ. ಅಷ್ಟೇ ಅಲ್ಲ, ಬಿಳಿಯನ ಮುಂದೆ ಪೂರ್ಣ ನಗ್ನವಾಗಿ ನಿಲ್ಲುತ್ತೇವೆ. ಆದರೆ ನಿಮ್ಮದೇ ಸರ್ಕಾರ ನಿಮ್ಮ ಹೆಸರು ಮತ್ತು ವಿಳಾಸ ನೀಡಿ ಎಂದು ಕೇಳಿದರೆ ಖಾಸಗಿತನದ ಉಲ್ಲಂಘನೆಯಾಗಿದೆ ಎಂಬ ದೊಡ್ಡ ಕ್ರಾಂತಿಯೇ ನಡೆಯುತ್ತದೆ’ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಅಲ್ಫೋನ್ಸ್‌ ಕಣ್ಣಂತಾನಂ ಶುಕ್ರವಾರ ಹೇಳಿದ್ದರು. ಇದೇ ಹೇಳಿಕೆಯನ್ನು ಅವರು ಭಾನುವಾರವೂ ಪುನರುಚ್ಚರಿಸಿದ್ದಾರೆ. 

ಆಧಾರ್‌ನಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಕಳವಳ ಅಗತ್ಯವಿಲ್ಲ ಎಂಬುದನ್ನು ಸಮರ್ಥಿಸುವುದಕ್ಕಾಗಿ ಅಲ್ಫೋನ್ಸ್‌ ಅವರು ಹೀಗೆ ಹೇಳಿದ್ದಾರೆ.

ಟೆಲಿಫೋನ್‌ ಡೈರೆಕ್ಟರಿಗೆ ನೀಡುವ ಮಾಹಿತಿಗಿಂತ ಹೆಚ್ಚಿನ ಮಾಹಿತಿಯೇನೂ ಆಧಾರ್‌ಗೆ ಬೇಕಾಗಿಲ್ಲ. ಆಧಾರ್‌ ಯೋಜನೆಯ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆಧಾರ್‌ಗೆ ನೀಡಿರುವ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ಅವರು ಅಲ್ಲಗಳೆದಿದ್ದಾರೆ. ಆಧಾರ್‌ ದತ್ತಾಂಶ ಎಂದೂ ಸೋರಿಕೆಯಾಗಿಲ್ಲ ಎಂದಿದ್ದಾರೆ.

ADVERTISEMENT

ವೀಸಾಕ್ಕಾಗಿ ಅರ್ಜಿ ಹಾಕುವುದು ವೈಯಕ್ತಿಕ ವಿಚಾರ. ಆದರೆ ಆಧಾರ್‌ ನೋಂದಣಿಯನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅಲ್ಫೋನ್ಸ್‌, ಆಧಾರ್‌ ನೋಂದಣಿ ಮಾಡಿಲ್ಲದವರಿಗೆ ಯಾವುದೇ ಸೌಲಭ್ಯವನ್ನು ಸರ್ಕಾರ ನಿರಾಕರಿಸಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.