ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್‌ ಠಾಕೂರ್‌ ವಜಾ

ಏಜೆನ್ಸೀಸ್
Published 2 ಜನವರಿ 2017, 10:45 IST
Last Updated 2 ಜನವರಿ 2017, 10:45 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್‌ ಠಾಕೂರ್‌ ಅವರನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಅಲ್ಲದೆ ಬಿಸಿಸಿಐನ ಕಾರ್ಯದರ್ಶಿ ಸ್ಥಾನದಿಂದ ಅಜಯ್‌ ಶಿರ್ಕೆ ಅವರನ್ನು ವಜಾಗೊಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.

ಲೋಧಾ ಸಮಿತಿ ವರದಿ ಆಧರಿಸಿ ಸುಪ್ರೀಂಕೋರ್ಟ್‌ ಈ ಮಹತ್ವದ ಆದೇಶ ನೀಡಿದೆ.

ADVERTISEMENT

ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳನ್ನು ನೇಮಿಸುವುದಾಗಿ ಹೇಳಿರುವ ನ್ಯಾಯಪೀಠ ಜನವರಿ 19ರಂದು ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.

ಬಿಸಿಸಿಐನ ಪದಾಧಿಕಾರಿಗಳ ಆಯ್ಕೆಗಾಗಿ ಹಿರಿಯ ವಕೀಲರಾದ ಫಾಲಿ ನಾರಿಮನ್‌ ಮತ್ತು ಗೋಪಾಲ್‌ ಸುಬ್ರಮಣಿಯನ್‌ ಅವರನ್ನು ಸುಪ್ರೀಂಕೋರ್ಟ್‌ ಅಮಿಕಸ್ ಕ್ಯೂರಿಗಳನ್ನಾಗಿ ನೇಮಿಸಿದೆ.

‘ಇದು ನನ್ನ ವೈಯಕ್ತಿಕ ಹೋರಾಟವಲ್ಲ. ನಾನು ಒಂದು ಸ್ವಾಯತ್ತ  ಕ್ರೀಡಾ ಸಂಸ್ಥೆಯ ಪರವಾಗಿದ್ದೇನೆ. ನಿವೃತ್ತ ನ್ಯಾಯಮೂರ್ತಿಗಳು ಬಿಸಿಸಿಐಯನ್ನು ಉತ್ತಮವಾಗಿ ನಡೆಸುತ್ತಾರೆ ಎಂದು ಸುಪ್ರೀಂಕೋರ್ಟ್‌ ಭಾವಿಸಿದರೆ ಅವರಿಗೆ ಒಳ್ಳೆಯದಾಗಲಿ. ಅವರು ಈ ಕೆಲಸವನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

ಸುಳ್ಳು ಸಾಕ್ಷ್ಯಆರೋಪ
ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ವಿಷಯಕ್ಕೆ ಸಂಬಂಧಿಸಿದಂತೆ ಅನುರಾಗ್ ಠಾಕೂರ್‌ ಅವರು ಸುಳ್ಳು ಸಾಕ್ಷ್ಯ ಸಲ್ಲಿಸಿದ ಆರೋಪ ಎದುರಿಸುತ್ತಿದ್ದರು.

ಶಿಫಾರಸು ಅನುಷ್ಠಾನ ಮಾಡುವ ವಿಷಯದ ಬಗ್ಗೆ ಅಂತರ ರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮುಖ್ಯಸ್ಥ ಶಶಾಂಕ್‌ ಮನೋಹರ್ ಅವರ ಜೊತೆ ಚರ್ಚಿಸುವಂತೆ ಸುಪ್ರೀಂಕೋರ್ಟ್‌ ಅನುರಾಗ್‌ ಅವರಿಗೆ ಸೂಚಿಸಿತ್ತು. ಈ ಆದೇಶ ಪಾಲಿಸಿರುವುದಾಗಿ ಅನುರಾಗ್‌ ಅವರು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು.

ಅನುರಾಗ್ ಅವರು ಶಶಾಂಕ್‌ ಜೊತೆ ಯಾವ ವಿಷಯವನ್ನೂ ಚರ್ಚಿಸದೇ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ ಸಂಶಯ ವ್ಯಕ್ತಪಡಿಸಿತ್ತು.

‘ಬಿಸಿಸಿಐಗೆ ಆಡಳಿತಾಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಅದರಿಂದ ಅಂತಿಮವಾಗಿ ಕ್ರಿಕೆಟ್‌ಗೆ ಪ್ರಯೋಜನವಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.