ADVERTISEMENT

ಬೀದಿ ಬದಿ ವ್ಯಾಪಾರಿಗಳು ನಿರಾಳ

ಪೊಲೀಸರು, ಸ್ಥಳೀಯ ಸಂಸ್ಥೆ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಅವಿರೋಧವಾಗಿ ಅಂಗೀಕಾರಗೊಂಡಿರುವ `ಬೀದಿ ಬದಿಯ ವ್ಯಾಪಾರ ಮತ್ತು ನಗರಗಳ ಬೀದಿ ಬದಿಯ ವರ್ತಕರ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ 2012'ರ ಕೆಲ ಪ್ರಮುಖ ಅಂಶಗಳು ಹೀಗಿವೆ.

* ಮಸೂದೆಯಲ್ಲಿನ ಅಂಶಗಳನ್ನು ಜಾರಿಗೊಳಿಸಲು ಪ್ರತಿ ಪಟ್ಟಣಗಳಲ್ಲಿ ಪಟ್ಟಣ ವ್ಯಾಪಾರ ಪ್ರಾಧಿಕಾರ ಸ್ಥಾಪಿಸುವುದು.

* ವ್ಯಾಪಾರ ವಲಯ ಗುರುತಿಸುವಿಕೆ, ಬೀದಿ ಬದಿ ವ್ಯಾಪಾರಕ್ಕೆ ಯೋಜನೆ ರೂಪಿಸುವುದು ಮತ್ತು ವ್ಯಾಪಾರಿಗಳ ಸಮೀಕ್ಷೆಗೆ ಸಂಬಂಧಿಸಿದ ತೀರ್ಮಾನ
ಕೈಗೊಳ್ಳುವಾಗ ಬೀದಿ ಬದಿ ವ್ಯಾಪಾರಿಗಳ ಪಾಲ್ಗೊಳ್ಳುವಿಕೆ ಖಾತ್ರಿ ಪಡಿಸಬೇಕು. ನಗರ ವ್ಯಾಪಾರಿಗಳ ಸಮಿತಿ (ಟಿ.ವಿ.ಸಿ)ಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಅಂಗವಿಕಲರು ಸೇರಿದಂತೆ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಪ್ರತಿನಿಧಿಗಳಾಗಿ ಇರಬೇಕು. ಟಿ.ವಿ.ಸಿಯಲ್ಲಿ ಶೇ 40ರಷ್ಟು ಸದಸ್ಯರು ಬೀದಿ ಬದಿ ವ್ಯಾಪಾರಿಗಳಿರಬೇಕು. ಅವರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು. ಒಟ್ಟು ಸದಸ್ಯರಲ್ಲಿ ಶೇ. 33 ರಷ್ಟು ಮಹಿಳೆಯರು ಇರಬೇಕು.

* ಅಧಿಕಾರಿಗಳ ಸ್ವೇಚ್ಛಾ ವರ್ತನೆಯನ್ನು ತಪ್ಪಿಸಲು ಸದ್ಯಕ್ಕಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು ಮತ್ತು ಎಸ್.ಸಿ, ಎಸ್.ಟಿ, ಒಬಿಸಿ, ಮಹಿಳೆಯರು, ಅಂಗವಿಕಲರು ಮತ್ತು ಅಲ್ಪಸಂಖ್ಯಾತರನ್ನು ಗುರುತಿಸಿ ಪ್ರಮಾಣ ಪತ್ರ ನೀಡಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಸಮೀಕ್ಷೆ ನಡೆಸಬೇಕು.

*  ಪ್ರಮಾಣಪತ್ರ ಪಡೆದ ವ್ಯಾಪಾರಿ ಮೃತಪಟ್ಟಲ್ಲಿ, ಯಾವುದೇ ಕಾರಣಕ್ಕೆ ವ್ಯಾಪಾರ ಮಾಡಲು ಸಾಧ್ಯವಾಗದಿದ್ದಲ್ಲಿ, ಅವರ ಕುಟುಂಬ ವರ್ಗದವರು ವ್ಯಾಪಾರ ಮಾಡಬಹುದು.

* ಎಲ್ಲ ಬೀದಿ ವರ್ತಕರನ್ನು ಸಮೀಕ್ಷೆಯಲ್ಲಿ ಗುರುತಿಸಿ ವ್ಯಾಪಾರ ವಲಯದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ನಗರ, ಪಟ್ಟಣ ಅಥವಾ ವಲಯದ ಜನಸಂಖ್ಯೆಯಲ್ಲಿ 2.5ರಷ್ಟು ಮಾತ್ರ ಬೀದಿ ವ್ಯಾಪಾರಿಗಳಿರುವಂತೆ ನೋಡಿಕೊಳ್ಳಬೇಕು.

* ಮಸೂದೆಯ ಸೆಕ್ಷನ್ 29, ಅಧಿಕಾರಿಗಳು ಮತ್ತು ಪೊಲೀಸ್ ಕಿರುಕುಳದಿಂದ ಬೀದಿ ವ್ಯಾಪಾರಿಗಳಿಗೆ ರಕ್ಷಣೆ ಒದಗಿಸಿ, ಯಾವುದೇ ಭಯವಿಲ್ಲದೇ ವ್ಯಾಪಾರ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡುತ್ತದೆ.

* ಸುಮಾರು ಒಂದು ಕೋಟಿ ಬೀದಿ ವ್ಯಾಪಾರಿಗಳು ಘನತೆಯಿಂದ ವ್ಯಾಪಾರ ನಡೆಸಲು ಮತ್ತು ಜೀವನೋಪಾಯ ಹಕ್ಕುಗಳಿಗೆ ರಕ್ಷಣೆ ಸಿಗಲಿದೆ.

* ವ್ಯಾಪಾರ ವಲಯದಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಬೀದಿ ವ್ಯಾಪಾರಿಗಳಿದ್ದರೆ ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕು. ಉಳಿದ ವ್ಯಾಪಾರಿಗಳಿಗೆ ಸಮೀಪದ ವ್ಯಾಪಾರ ವಲಯದಲ್ಲಿ ಅವಕಾಶ ಮಾಡಿಕೊಡಬೇಕು.

* ಸಮೀಕ್ಷೆ  ಪೂರ್ಣಗೊಂಡು ಪ್ರಮಾಣ ಪತ್ರ ವಿತರಿಸುವವರೆಗೆ ಬೀದಿ ಬದಿ ವ್ಯಾಪಾರಿಯನ್ನು ಸ್ಥಳಾಂತರಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.