ADVERTISEMENT

ಬೆಂಗಳೂರಿಗೆ ₹667 ಕೋಟಿ

ಕೇಂದ್ರದ ನಿರ್ಭಯಾ ಯೋಜನೆ: ಮಹತ್ವದ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಬೆಂಗಳೂರಿಗೆ ₹667 ಕೋಟಿ
ಬೆಂಗಳೂರಿಗೆ ₹667 ಕೋಟಿ   

ನವದೆಹಲಿ: ಬೆಂಗಳೂರು ನಗರದ ‘ಸೇಫ್‌ ಸಿಟಿ’ (ಸುರಕ್ಷಿತ ನಗರ) ಪ್ರಸ್ತಾವಕ್ಕೆ ಕೇಂದ್ರದ ನಿರ್ಭಯಾ ನಿಧಿ ಸಮಿತಿಯು ಗುರುವಾರ ಅನುಮೋದನೆ ನೀಡಿದೆ. 

ನಗರದಲ್ಲಿ ನಿಗಾ ವ್ಯವಸ್ಥೆ ವೃದ್ಧಿ, ಮಹಿಳಾ ಪೊಲೀಸ್‌ ಹೊರಠಾಣೆ ಸ್ಥಾಪನೆ, ಮಹಿಳೆಯರು ಹೆಚ್ಚು ಅಪಾಯ ಎದುರಿಸುವ ಸ್ಥಳಗಳಲ್ಲಿ ಸುರಕ್ಷತೆ ಹೆಚ್ಚಳ ದಂತಹ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಒಟ್ಟು ₹667 ಕೋಟಿ ಮೊತ್ತದ ಕಾರ್ಯಕ್ರಮಗಳು ಇದರ ಭಾಗವಾಗಿವೆ.

ಪೊಲೀಸ್‌ ಠಾಣೆಗಳಲ್ಲಿ ಇರುವ ಸಹಾಯ ಕೇಂದ್ರಗಳಲ್ಲಿ ಎನ್‌ಜಿಒಗಳ ಸ್ವಯಂಸೇವಕರ ನೇಮಕ, ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಕೇಂದ್ರಗಳ ಸ್ಥಾಪನೆ ಮುಂತಾದವುಗಳು ‘ಸುರಕ್ಷಿತ ನಗರ ಪ್ರಸ್ತಾವನೆ’ಯಲ್ಲಿ (ಸೇಫ್‌ ಸಿಟಿ) ಸೇರಿವೆ.

ADVERTISEMENT

ಸಾರ್ವಜನಿಕರಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರಾಣಿ ಚನ್ನಮ್ಮ ತಂಡಗಳನ್ನು ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸಚಿವಾಲಯದ ಕಾರ್ಯದರ್ಶಿ ರಾಕೇಶ್‌ ಶ್ರೀವಾಸ್ತವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಪ್ರಸ್ತಾವಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಈ ಸಚಿವಾಲಯದ್ದಾಗಿದೆ.

ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್‌, ಕೋಲ್ಕತ್ತ, ಹೈದರಾಬಾದ್‌ ಮತ್ತು ಲಖನೌನ ‘ಸೇಫ್‌ ಸಿಟಿ’ ಯೋಜನೆಗಳಿಗೂ ಅನುಮೋದನೆ ನೀಡಲಾಗಿದೆ.

‘ಒಟ್ಟು ಎಂಟು ನಗರಗಳ ಸೇಫ್‌ ಸಿಟಿ ಪ‍್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ. ಅದರ ಒಟ್ಟು ಮೊತ್ತ ₹2,919 ಕೋಟಿ. ನಿರ್ಭಯಾ ನಿಧಿಯಲ್ಲಿ ಕೈಗೊಂಡ ಅತ್ಯಂತ ಮಹತ್ವದ ಉಪಕ್ರಮ ಇದು. ಮಹಿಳೆಯರ ಸುರಕ್ಷತೆಗೆ ಕೈಗೊಳ್ಳಲಾದ ಸಮಗ್ರವಾದ ಯೋಜನೆ ಇದು’ ಎಂದು ಸಚಿವಾಲಯ ಹೇಳಿದೆ.

ಈ ನಗರಗಳ ಪಾಲಿಕೆಗಳು ಮತ್ತು ಪೊಲೀಸ್‌ ಕಮಿಷನರೇಟ್‌ಗಳ ಜತೆ ಚರ್ಚಿಸಿ ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.