ADVERTISEMENT

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ವೇ ಷಟ್ಪಥ ಅಭಿವೃದ್ಧಿಗೆ ಜಪಾನ್ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:45 IST
Last Updated 12 ಜನವರಿ 2012, 19:45 IST

ನವದೆಹಲಿ: ಉದ್ದೇಶಿತ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಜಪಾನ್ ಸರ್ಕಾರ ಆಸಕ್ತಿ ತೋರಿದೆ.
`ಜಪಾನ್ ಮೂಲದ ಕಂಪೆನಿಯು ಈಗಾಗಲೇ ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ನಮ್ಮ ಸರ್ಕಾರ ಅದನ್ನು ಕಾರ್ಯರೂಪಕ್ಕೆ ಇಳಿಸಲು ಉತ್ಸುಕವಾಗಿದೆ~ ಎಂದು ಜಪಾನ್‌ನ ಭೂಮಿ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವ ತಕೇಶಿ ಮಯೇಡ ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಸಿ.ಪಿ.ಜೋಶಿ ಅವರನ್ನು ಇಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದರು.

`ನಾವು ಅತ್ಯಂತ ಪಾರದರ್ಶಕವಾದ ವ್ಯವಸ್ಥೆ ಹೊಂದಿದ್ದೇವೆ. ಆದ್ದರಿಂದ ಹರಾಜು ಪ್ರಕ್ರಿಯೆಯಲ್ಲಿ ನೀವು ಭಾಗವಹಿಸಬೇಕಾಗುತ್ತದೆ ಎಂದು ಜಪಾನ್ ಸರ್ಕಾರಕ್ಕೆ ನಾವು ಸ್ಪಷ್ಟಪಡಿಸಿದ್ದೇವೆ~ ಎಂದು ಸಭೆಯ ಬಳಿಕ ಜೋಶಿ ಸುದ್ದಿಗಾರರಿಗೆ ತಿಳಿಸಿದರು.

`ಆದಾಗ್ಯೂ ಜಪಾನ್‌ಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸುವ ಇಚ್ಛೆ ಇದ್ದರೆ ಅದು ಉನ್ನತ ಮಟ್ಟದಲ್ಲಿ, ಅಂದರೆ ಉಭಯ ದೇಶಗಳ ಪ್ರಧಾನಿಗಳ ನಡುವೆ ಚರ್ಚೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದೇವೆ~ ಎಂದು ಹೇಳಿದರು.

ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ವ್ಯವಹಾರ ನಡೆದರೆ ಸಂಬಂಧಪಟ್ಟ ದೇಶಕ್ಕೆ ಖುದ್ದಾಗಿ ಯೋಜನೆ ವಹಿಸಿಕೊಡಲಾಗುತ್ತದೆ. ಇದರಿಂದ ಅಲ್ಲಿನ ಕಂಪೆನಿಗಳು ನೇರವಾಗಿ ಇಲ್ಲಿಗೆ ಬಂದು ಯೋಜನೆಯ ಅಭಿವೃದ್ಧಿಗೆ ಮುಂದಾಗುತ್ತವೆ. ಆಗ ಯೋಜನೆಗೆ ಸಂಬಂಧಿಸಿದ ಹರಾಜಿನಲ್ಲಿ ಭಾಗವಹಿಸುವ ಅವಕಾಶ ಭಾರತದ ಉದ್ಯಮಿಗಳಿಗೆ ಇಲ್ಲವಾಗುತ್ತದೆ.

`ಹೆದ್ದಾರಿ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಇರುತ್ತದೆ ಮತ್ತು ಜಪಾನ್ ಕಂಪೆನಿಗಳು ಹರಾಜಿಗಾಗಿ ಸ್ಥಳೀಯ ಕಂಪೆನಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದು~ ಎಂದು ಸಚಿವರು ತಿಳಿಸಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ಅನುಷ್ಠಾನಕ್ಕೆ ಬರಲಿರುವ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಡಿ ನಿರ್ಮಾಣ- ನಿರ್ವಹಣೆ- ಹಸ್ತಾಂತರ (ಬಿಒಟಿ) ಆಧಾರದ ಮೇಲೆ ನಿರ್ಮಿಸಲಾಗುತ್ತದೆ.

ಈ ಷಟ್ಪಥ ಯೋಜನೆ ಜಾರಿಗೆ ಬಂದ ಬಳಿಕ ಬೆಂಗಳೂರು- ಚೆನ್ನೈ ಅಂತರ ಈಗಿರುವ 5-6 ಗಂಟೆಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.