ADVERTISEMENT

ಬೆಲೆ ಏರಿಕೆ ತಡೆಗೆ ಕೇಂದ್ರದ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 6:15 IST
Last Updated 14 ಜನವರಿ 2011, 6:15 IST

ನವದೆಹಲಿ (ಪಿಟಿಐ): ಗಗನಮುಖಿಯಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಖಾದ್ಯ ತೈಲ, ಬೇಳೆಕಾಳು ಹಾಗೂ ಬಾಸ್ಮತಿ ಹೊರತುಪಡಿಸಿದ ಅಕ್ಕಿ ಮೇಲಿನ ರಫ್ತು ನಿಷೇಧ ಮುಂದುವರಿಕೆ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.

ಕಾಳಸಂತೆಕೋರರು ಹಾಗೂ ಅಕ್ರಮ ದಾಸ್ತಾನು ಸಂಗ್ರಹಕಾರರನ್ನು ನಿಯಂತ್ರಿಸುವ ಭರವಸೆ ನೀಡಿರುವುದರ ಜೊತೆಗೆ, ಅಗತ್ಯ ವಸ್ತುಗಳ ಮೇಲಿನ ಸ್ಥಳೀಯ ತೆರಿಗೆಯನ್ನು ವರ್ಜಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.

ಜನಸಾಮಾನ್ಯರನ್ನು ಕಂಗೆಡಿಸಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಎರಡು ದಿನಗಳ ಉನ್ನತ ಮಟ್ಟದ ಚರ್ಚೆಯ ಬಳಿಕ, ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ನೇತೃತ್ವದಲ್ಲಿ ಅಂತರ ಸಚಿವರ ತಂಡವೊಂದನ್ನು ರಚಿಸಲು ಗುರುವಾರ ತೀರ್ಮಾನಿಸಲಾಗಿದೆ. ಒಟ್ಟಾರೆ ಹಣದುಬ್ಬರ, ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಆಹಾರ ಉತ್ಪನ್ನಗಳ ಬೆಲೆ ಏರಿಕೆಯನ್ನು ಈ ತಂಡ ಪರಿಶೀಲನೆಗೆ ಒಳಪಡಿಸಲಿದೆ.

ಆಹಾರ ವಸ್ತುಗಳ ಬೆಲೆ ಪದೇ ಪದೇ ವಿಪರೀತವಾಗಿ ಹೆಚ್ಚಾಗಿರುವುದನ್ನು ಪ್ರಧಾನಿ ಅವರ ಮಾಧ್ಯಮ ಸಲಹೆಗಾರರು ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಹಣದುಬ್ಬರಕ್ಕೆ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವೇ ಪ್ರಮುಖ ಕಾರಣವಾಗಿದೆ. ಇವು ಸಾರ್ವಜನಿಕ ಷೇರುಪೇಟೆಯಲ್ಲಿನ ವಸ್ತುಗಳಲ್ಲವಾದ್ದರಿಂದ ಅವುಗಳ ಬೆಲೆಗೆ ಕಡಿವಾಣ ಹಾಕುವುದು ಸುಲಭದ ಕಾರ್ಯವಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ಈರುಳ್ಳಿಯ ಬೆಲೆ ಏರಿಕೆಗೆ ಮಳೆ ಕಾರಣ ಎಂದು ತಿಳಿಸಿರುವ ಸರ್ಕಾರ, ಆರ್ಥಿಕತೆಯ ತ್ವರಿತ ವೃದ್ಧಿ ಮತ್ತು ಹಲವಾರು ಅಂತರ್ಗತ ಯೋಜನೆಗಳ ಪರಿಣಾಮವಾಗಿ ಸಾಕಷ್ಟು ಹಣ ಬಡವರ ಕೈ ಸೇರುವಂತಾಯಿತು. ಇದರಿಂದ ಅವರ ಆಹಾರ ಸೇವನೆ ಪ್ರಮಾಣ ಹೆಚ್ಚಿದ್ದು ಹಾಲು, ಮೊಟ್ಟೆ, ಮಾಂಸ ಹಾಗೂ ಮೀನಿನ ಬೆಲೆ ಏರಿಕೆಗೆ ಕಾರಣವಾಯಿತು ಎಂದು ಹೇಳಿದೆ.

ಮಾರುಕಟ್ಟೆಯ ಬೆಲೆ ಏರಿಕೆಯಲ್ಲಿ ಕೈಚಳಕ ತೋರಿಸುತ್ತಿರುವ ಕಾಳಸಂತೆಕೋರರು ಹಾಗೂ ಅಕ್ರಮ ದಾಸ್ತಾನುಕಾರರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ. ಉತ್ಪನ್ನಗಳು ಸಕಾಲದಲ್ಲಿ ಮಾರುಕಟ್ಟೆ ಪ್ರವೇಶಿಸುವಂತಾಗಿ ಬೆಲೆ ಇಳಿಕೆಗೆ ಅನುವು ಮಾಡಿಕೊಡಲು ಈ ಕ್ರಮ ಅಗತ್ಯ ಎಂದು ಅದು ಅಭಿಪ್ರಾಯಪಟ್ಟಿದೆ.
ದೊಡ್ಡ ವ್ಯಾಪಾರಿಗಳು ‘ಬೆಲೆ ಹತೋಟಿ ಕೂಟ’ ಕಟ್ಟಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಲು, ಅಗತ್ಯ ವಸ್ತು ಕಾಯ್ದೆ 1955 ಮತ್ತು ಸ್ಪರ್ಧಾತ್ಮಕ ಕಾಯ್ದೆ 2002ರ ಅನ್ವಯ ಇಂತಹ ಕ್ರಮಗಳ ಪರಿಣಾಮಕಾರಿ ಜಾರಿಯ ಮೇಲೆ ನಿಗಾ ಇಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ.

ಎಲ್ಲ ಅಗತ್ಯ ವಸ್ತುಗಳ ಆಮದು ಹಾಗೂ ರಫ್ತನ್ನು ನಿಯಮಿತವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ದೇಶೀ ಸರಬರಾಜಿಗೆ ಅನುವಾಗುವಂತೆ ರಫ್ತು ನಿಯಂತ್ರಣ, ಆಮದು ನಿರ್ಬಂಧಗಳನ್ನು ಸಡಿಲಗೊಳಿಸುವುದರ ಜೊತೆಗೆ ಅಗತ್ಯವಿದ್ದೆಡೆ ತೆರಿಗೆ ಇಳಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.