ADVERTISEMENT

ಬೆಲೆ ಏರಿಕೆ: ಬಿಜೆಪಿ ತರಾಟೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 13:15 IST
Last Updated 9 ಜನವರಿ 2011, 13:15 IST

ಗುವಾಹಟಿ (ಪಿಟಿಐ): ಬೆಲೆ ಏರಿಕೆಯು ಪ್ರಸಕ್ತ ದೇಶದ ಶ್ರೀಸಾಮಾನ್ಯನನ್ನು ಕಿತ್ತು ತಿನ್ನುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಕೆಂಡ ಕಾರಿದೆ.

ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯ ಸಂದರ್ಭದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಪಕ್ಷದ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ‘ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಅದನ್ನು ಕಿತ್ತೊಗೆದು ಎನ್‌ಡಿಎ ಸರ್ಕಾರವನ್ನು ಕೇಂದ್ರದಲ್ಲಿ ರಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ಸಭೆಯಲ್ಲಿ ಆಳವಾಗಿ ಚರ್ಚಿಸಲಾಗುತ್ತಿದೆ’ ಎಂದರು.

ಭ್ರಷ್ಟಾಚಾರ ನಿರ್ಮೂಲನೆ, ಹಣದುಬ್ಬರ, ಭಯೋತ್ಪಾದನೆ, ಅಸ್ಸಾಂನಲ್ಲಿ ಬಾಂಗ್ಲಾದೇಶೀಯರ ವಲಸೆ ಸಮಸ್ಯೆಗಳತ್ತ ಈ ಸಭೆ ಹೆಚ್ಚಿನ ಗಮನ ಹರಿಸಲಿದೆ ಎಂದರು.

ADVERTISEMENT

 ಮಧ್ಯೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ತಮ್ಮ ಆರಂಭಿಕ ಭಾಷಣದಲ್ಲಿ ಈಶಾನ್ಯ ರಾಜ್ಯಗಳಲ್ಲಿನ ಉಗ್ರಗಾಮಿ ಚಟುವಟಿಕೆಗಳ ಸಹಿತ ಕೇಂದ್ರ ಸರ್ಕಾರದ ಹಲವು ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಿದ್ದು, ಉಗ್ರಗಾಮಿ ಸಮಸ್ಯೆ ಬಗೆಹರಿಸುವ ಮಾರ್ಗೋಪಾಯಗಳನ್ನು ಸೂಚಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮತ ಬ್ಯಾಂಕ್ ರಾಜಕಾರಣದಿಂದಾಗಿ ಯುಪಿಎ ಸರ್ಕಾರವು ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶದೊಳಕ್ಕೆ ನುಸುಳುವವರಿಗೆ ‘ರತ್ನಗಂಬಳಿ’ ಸ್ವಾಗತ ನೀಡುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.