ADVERTISEMENT

`ಬೇರೆ ಪಕ್ಷದ ವ್ಯವಹಾರದಲ್ಲಿ ಮೂಗು ತೂರಿಸಬೇಡಿ'

ಶರದ್ ಯಾದವ್‌ಗೆ ನಾಯ್ಡು ತಾಕೀತು

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಚೆನ್ನೈ (ಪಿಟಿಐ):  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡಿರುವುದನ್ನು ಪ್ರಶ್ನಿಸಿರುವ ಜೆಡಿಯು ಅಧ್ಯಕ್ಷ ಶರದ್ ಯಾದವ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ದು ಅವರು, ಬೇರೆ ಪಕ್ಷಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸಬಾರದು ಎಂದು ಹೇಳಿದ್ದಾರೆ.

ಎನ್‌ಡಿಎ ಜತೆಗಿನ 17 ವರ್ಷಗಳ ಮೈತ್ರಿಯನ್ನು ಕಡಿದುಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದ ನಾಯ್ಡು ಅವರು, `ಜೆಡಿಯು ಅಧ್ಯಕ್ಷರು ಯಾರಾಗಬೇಕೆಂದು ಯಾರು ಬೇಕಾದರೂ ಹೇಳಬಹುದೆ? ಅದೇ ರೀತಿಯಲ್ಲಿ ನಮ್ಮ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರು ಯಾರಾಗಬೇಕು ಎಂಬುದನ್ನು ನಿರ್ಧರಿಸುವುದು ನಮ್ಮ ಹಕ್ಕು' ಎಂದು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಮೋದಿ ನಾಯಕತ್ವವನ್ನು ಪ್ರಶಂಸಿದ್ದ ಜೆಡಿಯು ಈಗ ಮೋದಿ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದನ್ನೇ ನೆಪ ಮಾಡಿಕೊಂಡು  ಮೈತ್ರಿಕೂಟದಿಂದ ದೂರ ಹೋಗಿರುವುದು ಸಕಾರಣವಲ್ಲ ಹಾಗೂ ಆ ಪಕ್ಷ (ಜೆಡಿಯು) ನೀಡಿರುವ ವಿವರಣೆ ತೃಪ್ತಿಕರವೂ ಅಲ್ಲ ಎಂದು ಹೇಳಿದ್ದಾರೆ. 

ಎನ್‌ಡಿಎದಿಂದ ಹೊರಗೆ ಹೋಗಿರುವುದಕ್ಕೆ ಜೆಡಿಯು ಸೂಕ್ತ ಕಾರಣಗಳನ್ನು ನೀಡಲೇಬೇಕು ಎಂದು ನಾಯ್ಡು ಆಗ್ರಹಪಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲು ರಾಜಕೀಯ ಪಕ್ಷಗಳಲ್ಲಿ ಮರು ಹೊಂದಾಣಿಕೆ ಆಗುವ ಸಾಧ್ಯತೆಗಳು ಇವೆ ಎಂದು ಅವರು ಭವಿಷ್ಯ ನುಡಿದರು.

ಮೋದಿ ಹೆಸರು ಕೇಳಿ ಬೆಚ್ಚಿಬೀಳುವ ಕಾಂಗ್ರೆಸ್ ಮುಖಂಡರು ಈಗ ಮತ್ತೆ `ಜಾತ್ಯತೀತತೆ ಅಪಾಯದಲ್ಲಿದೆ' ಎಂಬ ಹಳೆಯ ರಾಗವನ್ನೇ ಹಾಡತೊಡಗಿದ್ದಾರೆ. ಆಂಧ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಹೈದರಾಬಾದ್‌ನಲ್ಲಿ ಎಂಐಎಂ ಜತೆ ಸಖ್ಯ ಹೊಂದಿದೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.