ADVERTISEMENT

ಭದ್ರತಾ ಹಿತದೃಷ್ಟಿ: ದೇವಾಸ್ ಒಪ್ಪಂದ ರದ್ದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಚೆನ್ನೈ (ಐಎಎನ್‌ಎಸ್): ಇಸ್ರೊದ ವಾಣಿಜ್ಯ ಘಟಕ ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿಮೀಡಿಯಾ ನಡುವಿನ ಎಸ್-ಬ್ಯಾಂಡ್ ಹಂಚಿಕೆ ಒಪ್ಪಂದವನ್ನು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯಿಂದ ರದ್ದು ಪಡಿಸಲಾಗಿದೆಯೇ ವಿನಃ ಎಸ್-ಬ್ಯಾಂಡ್ ಹಂಚಿಕೆಯಿಂದ ಆಗುತ್ತಿದ್ದ ನಷ್ಟದ ಕಾರಣದಿಂದ ಅಲ್ಲ ಎಂದು ಪ್ರಧಾನಿ ಕಚೇರಿ ವ್ಯವಹಾರಗಳ ರಾಜ್ಯಸಚಿವ ವಿ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಒತ್ತಡ ಅಥವಾ ಮಹಾಲೇಖಪಾಲರು ಅಂದಾಜು ಮಾಡಿರುವ ನಷ್ಟದ ಕಾರಣದಿಂದ ಈ ಒಪ್ಪಂದವನ್ನು ರದ್ದುಪಡಿಸಿಲ್ಲ. ಬದಲಾಗಿ ಇದರಲ್ಲಿ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಅಡಗಿರುವ ಹಿನ್ನೆಲೆಯಲ್ಲಿ ಒಪ್ಪಂದವನ್ನು ರದ್ದು ಮಾಡಬೇಕಾಯಿತು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

ಬಿ.ಕೆ.ಚತುರ್ವೇದಿ ಮತ್ತು ರೊದ್ದಂ ನರಸಿಂಹ ಅವರನ್ನು ಒಳಗೊಂಡ ಸಮಿತಿ ವಿವಾದಾತ್ಮಕ ಅಂತರಿಕ್ಷ್- ದೇವಾಸ್ ಒಪ್ಪಂದ ಕುರಿತು ತನಿಖೆ ನಡೆಸಿದ್ದು, ಅಂತರಿಕ್ಷ್ ಕಡಿಮೆ ಬೆಲೆಗೆ ದೇವಾಸ್ ಮಲ್ಟಿಮೀಡಿಯಾಗೆ ತರಂಗಾಂತರ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಕಡಿಮೆ ಬೆಲೆಗೆ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಮಾಡಲಾಗಿದೆ ಎನ್ನುವುದಕ್ಕೆ ಯಾವುದೇ ಮಾನದಂಡ ಇಲ್ಲ. ಬಾಹ್ಯಾಕಾಶ ತರಂಗಗಳನ್ನು ಭೂಮಂಡಲ ತರಂಗಾಂತರಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಹಾಗೆಯೇ ದೇವಾಸ್ ಮಲ್ಟಿಮೀಡಿಯಾ, ದೂರ ಸಂಪರ್ಕ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗಳಿಂದ ಪರವಾನಗಿ ಪಡೆದು ನಂತರ ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು. ಜತೆಗೆ ಇದಕ್ಕೆ ತಕ್ಕ ಶುಲ್ಕವನ್ನು ಪಾವತಿಸಬೇಕು. ಟ್ರಾನ್ಸ್‌ಫಾಂಡರ್ ಗುತ್ತಿಗೆ ಶುಲ್ಕವಲ್ಲದೇ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಗದಿ ಪಡಿಸಿದ ಇತರೆ ಶುಲ್ಕಗಳನ್ನೂ ಪಾವತಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದರು.

ಸಮಿತಿಯ ವರದಿಯ ಕೆಲವು ಭಾಗಗಳನ್ನು ಮಾತ್ರವೇ ಶನಿವಾರ ಇಸ್ರೊ ಬಹಿರಂಗ ಪಡಿಸಿದೆ. 2005ರ ಮಾಹಿತಿ ಹಕ್ಕು ಕಾಯಿದೆ ಸೆಕ್ಷನ್ 8 (1) (ಎ) ಅನ್ವಯ ಕೆಲವು ಭಾಗವನ್ನು ಗುಪ್ತವಾಗಿ ಇಟ್ಟಿದೆ ಎಂದು ತಿಳಿಸಿದರು.

ಅಂತರಿಕ್ಷ್- ದೇವಾಸ್ ನಡುವಿನ ಎಸ್-ಬ್ಯಾಂಡ್ ಹಂಚಿಕೆ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ತಮ್ಮ ವರದಿಯಲ್ಲಿ ತಿಳಿಸಿದ್ದರು. ನಂತರ ಸರ್ಕಾರ ಒಪ್ಪಂದವನ್ನು ರದ್ದುಪಡಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.