ADVERTISEMENT

ಭಾಗವತ್ `ಮನು'ವಾದ

ಮಾನಿನಿ ಮನೆಗೆಲಸಕ್ಕೆ ಮಾತ್ರ ಲಾಯಕ್ಕು

​ಪ್ರಜಾವಾಣಿ ವಾರ್ತೆ
Published 6 ಜನವರಿ 2013, 19:59 IST
Last Updated 6 ಜನವರಿ 2013, 19:59 IST

ಇಂದೋರ್ (ಪಿಟಿಐ): ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್, `ಪತಿ ಹಾಗೂ ಮನೆ ನೋಡಿಕೊಳ್ಳುವ ಒಪ್ಪಂದಕ್ಕೆ ಮಹಿಳೆ ಬದ್ಧಳಾಗಿದ್ದು, ಮನೆ ನೋಡಿಕೊಳ್ಳಲು ವಿಫಲಗೊಳ್ಳುವ ಪತ್ನಿಯನ್ನು ಪತಿ ಕೈಬಿಡಬಹುದು' ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

`ನೀನು ಗೃಹಕೃತ್ಯಗಳನ್ನು ನೋಡಿಕೊಂಡರೆ ನಿನ್ನ ಅಗತ್ಯಗಳನ್ನು ಪೂರೈಸಿ ರಕ್ಷಣೆ ನೀಡುವ ಜವಾಬ್ದಾರಿ ನನ್ನದು ಎನ್ನುವ ಒಪ್ಪಂದದ ಆಧಾರದಲ್ಲೇ ಪತಿ ಪತ್ನಿಯರ ಜೀವನ ಇರುತ್ತದೆ. ಪತಿ ಈ ಒಪ್ಪಂದದ ನಿಬಂಧನೆಗಳಿಗೆ ಬದ್ಧನಾಗಿರುತ್ತಾನೆ. ಪತ್ನಿಯೂ ಒಪ್ಪಂದಕ್ಕೆ ಬದ್ಧವಾಗಿರುವವರೆಗೆ ಆತ ಆಕೆಯ ಜತೆ ಇರುತ್ತಾನೆ. ಒಂದು ವೇಳೆ ಪತ್ನಿ ಒಪ್ಪಂದ ಉಲ್ಲಂಘಿಸಿದಲ್ಲಿ ಆಗ ಆತ ಆಕೆಯ ಕೈಬಿಡಬಹುದು' ಎಂದು ಭಾಗವತ್ ಅವರು ಇಂದೋರ್‌ನಲ್ಲಿ ಶನಿವಾರ ಜರುಗಿದ ರ‌್ಯಾಲಿಯೊಂದರಲ್ಲಿ  ಅಭಿಪ್ರಾಯಪಟ್ಟಿದ್ದಾರೆ.

ಭಾಗವತ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್, `ಈ ಹೇಳಿಕೆಯಿಂದ ಅಚ್ಚರಿಯಾಗಿಲ್ಲ. ಈ ಮೂಲಕ `ಆರೆಸ್ಸೆಸ್'ನ  ನಿಜ ಬಣ್ಣ ಬಯಲಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇದೇ `ಆರೆಸ್ಸೆಸ್'  ಮನುಸ್ಮೃತಿಯ ಆಧಾರದಲ್ಲಿ ಭಾರತಕ್ಕೆ ಹೊಸ ಸಂವಿಧಾನ ರಚಿಸಬೇಕು ಎಂದು ಹೇಳಿತ್ತು. ಭಾಗವತ್ ಅವರ ಈ ಭಾಷೆ ಅವರ ಸಿದ್ಧಾಂತ ಪ್ರತಿಬಿಂಬಿಸುತ್ತದೆ ಅಷ್ಟೇ' ಎಂದು ಖಂಡಿಸಿದ್ದಾರೆ.

`ಭಾರತದಲ್ಲಿ ಜಾತಿ ವ್ಯವಸ್ಥೆ ಆಧರಿಸಿ ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲೆ ಅತಿಯಾದ ದೌರ್ಜನ್ಯ ನಡೆಯುತ್ತಿದೆ. ಇದು ಅವರಿಗೆ (ಭಾಗವತ್) ಗೊತ್ತಿದೆಯೋ, ಇಲ್ಲವೋ ನನಗೆ  ತಿಳಿದಿಲ್ಲ. ಈ ಜನ ಹಿಂದುತ್ವ ಮತ್ತು ಹಿಂದು ರಾಷ್ಟ್ರದ ಬಗ್ಗೆ ಮಾತನಾಡುವಾಗ ಅದು ಪಿತೃಪ್ರಧಾನ ಹಾಗೂ ಜಾತಿ ವ್ಯವಸ್ಥೆಯ ಪರವಾದ ಚೌಕಟ್ಟಿನಲ್ಲಿ ಇರುತ್ತದೆ. ಮಹಿಳೆ ಪುರುಷರ ಅಡಿಯಾಳು ಹಾಗೂ ಪುರುಷರ ಹಿಂಬಾಲಕಿ ಎಂಬ ನಂಬಿಕೆ ಅವರಲ್ಲಿದೆ' ಎಂದೂ ಬೃಂದಾ ಟೀಕಿಸಿದ್ದಾರೆ.

ಆರೆಸ್ಸೆಸ್ ಸ್ಪಷ್ಟನೆ: ಏತನ್ಮಧ್ಯೆ ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್, ವಿವಾಹ ವ್ಯವಸ್ಥೆ ಕುರಿತು ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆಯನ್ನು ಸಂಪೂರ್ಣ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

`ಅವರ ಅಭಿಪ್ರಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ. ಪಾಶ್ಚಿಮಾತ್ಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆ ವಿವಾಹವನ್ನು ಒಂದು ಒಪ್ಪಂದ ಎಂದು ಭಾವಿಸುತ್ತಾರೆ. ಆದರೆ, ಭಾರತದಲ್ಲಿ ವಿವಾಹವನ್ನು ಪವಿತ್ರ ಎಂದು ಭಾವಿಸುತ್ತಾರೆ. ಇಲ್ಲಿ ಮಹಿಳೆಗೆ ಅಪಾರ ಗೌರವವಿದೆ ಹಾಗೂ ಪುರುಷನಿಗೆ ಕೆಲ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ ಎಂದು ಅವರು ಹೇಳಿದ್ದರು. ಆದರೆ, ಭಾಗವತ್ ಅವರು ಭಾರತೀಯ ವಿವಾಹವನ್ನೇ ಒಪ್ಪಂದ ಎಂದು ಹೇಳಿದಂತೆ ಬಿಂಬಿಸಲಾಗಿದೆ. ಅವರು ಹೇಳಿಕೆಯನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ' ಎಂದೂ ರಾಮ್ ಮಾಧವ್ ತಿಳಿಸಿದ್ದಾರೆ.

ದೆಹಲಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರ ಹೇಳಿಕೆ ನೀಡಿದ್ದ ಭಾಗವತ್, ಅತ್ಯಾಚಾರ ಪ್ರಕರಣಗಳು ದೇಶದ ಗ್ರಾಮಾಂತರ (ಭಾರತ್) ಭಾಗದಲ್ಲಿ ನಡೆಯುವುದಿಲ್ಲ. ಬದಲಿಗೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ (ಇಂಡಿಯಾ) ನಗರಗಳಲ್ಲೇ ನಡೆಯುತ್ತವೆ' ಎಂದೂ ಹೇಳಿದ್ದರು. ಈ ಹೇಳಿಕೆಗೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕಾಂಗ್ರೆಸ್ ಮತ್ತು ಸಿಪಿಎಂ ಭಾಗವತ್ ಅವರನ್ನು ಖಂಡಿಸಿದ್ದರೆ, ಬಿಜೆಪಿ ಮತ್ತು ಆರೆಸ್ಸೆಸ್  ಅವರ ಮಾತುಗಳನ್ನು ಸರಿಯಾದ ಅರ್ಥದಲ್ಲಿ ಪರಿಗಣಿಸಬೇಕು ಎಂದು ಹೇಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.