ADVERTISEMENT

ಭಾರತದ ಪಾಲಿಗೆ ಕರಾಳ ಬುಧವಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಶುಕ್ರವಾರ ಹೊರತುಪಡಿಸಿದರೆ ಬುಧವಾರ ವಿಧ್ವಂಸಕ ಉಗ್ರರ ಪಾಲಿಗೆ ಅತ್ಯಂತ ಪ್ರಶಸ್ತ ದಿನವೇ?- ದೆಹಲಿ ಹೈಕೋರ್ಟ್ 5ನೇ ಗೇಟ್ ಬಳಿ ಬುಧವಾರ ಬೆಳಿಗ್ಗೆ ಪ್ರಬಲ ಬಾಂಬ್ ಸ್ಫೋಟಿಸಿದ ನಂತರ ಈ ಪ್ರಶ್ನೆ ಉದ್ಭವವಾಗಿದೆ.

ಇದಕ್ಕೆ ಮುನ್ನ ಮೇ 25ರಂದು ಇದೇ ಕೋರ್ಟ್ ಬಳಿ ಸ್ಫೋಟ ಸಂಭವಿಸಿತ್ತು. ಅವತ್ತು ಕೂಡ ಬುಧವಾರವೇ.
ಮುಂಬೈನಲ್ಲಿ ಇದೇ ಜುಲೈನಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು ಕೂಡ ಬುಧವಾರದಂದೇ. ಆ ಸ್ಫೋಟಗಳಲ್ಲಿ 18 ಜನ ಸಾವಿಗೀಡಾಗಿ 141 ಜನ ಗಾಯಗೊಂಡಿದ್ದರು.

ರಾಷ್ಟ್ರದ ಮೇಲಿನ ಅತ್ಯಂತ ಘೋರ ದಾಳಿಗಳಲ್ಲಿ ಒಂದಾದ 26/11ರ ಮುಂಬೈ ದಾಳಿ ಕೂಡ ನಡೆದದ್ದು ಬುಧವಾರವೇ.

ಈ ದಾಳಿಗಳಿಗೂ ಹಾಗೂ ಅವುಗಳು ಬುಧವಾರದಂದೇ ನಡೆಯುತ್ತಿರುವುದಕ್ಕೂ ಸಂಬಂಧವಿದೆ ಎಂಬುದನ್ನು ಪುಷ್ಟೀಕರಿಸಲು ಯಾವುದೇ ದಾಖಲೆಗಳೂ ಇಲ್ಲ. ಆದರೂ, ಶುಕ್ರವಾರ ಹೊರತುಪಡಿಸಿದರೆ ಬುಧವಾರ ಉಗ್ರರಿಗೆ ಪ್ರಶಸ್ತವಿರಬಹುದೇನೂ ಎಂಬ ಅನುಮಾನ ಮೂಡಿದೆ.

ಇದಕ್ಕೆ ಮುನ್ನ 1993ರಲ್ಲಿ ಮುಂಬೈ ಸರಣಿ ಸ್ಫೋಟ, 2006ರಲ್ಲಿ ದೆಹಲಿ ಜುಮ್ಮಾ ಮಸೀದಿ ಸ್ಫೋಟ ಹಾಗೂ 2007ರಲ್ಲಿ ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟಗಳು ಶುಕ್ರವಾರದಂದು ಸಂಭವಿಸಿದ್ದವು.

ವಿಳಂಬ ನೀತಿ ಕಾರಣ?
ನವದೆಹಲಿ: ದೆಹಲಿ ಹೈಕೋರ್ಟ್‌ನ ಕಕ್ಷಿಗಾರರು ಮತ್ತಿತರರು ಓಡಾಡುವ ಗೇಟ್ 4 ಮತ್ತು 5ಕ್ಕೆ `ಕ್ಲೋಸ್ ಸರ್ಕ್ಯೂಟ್ ಟೀವಿ~ (ಸಿಸಿಟಿವಿ) ಹಾಗೂ ಲೋಹ ಶೋಧಕಗಳನ್ನು ಅಳವಡಿಸಲು ಅನುಸರಿಸಿದ ವಿಳಂಬ ನೀತಿಯಿಂದಾಗಿ ಬಾಂಬ್ ಸ್ಫೋಟಕ್ಕೆ ಕಾರಣವಾಯಿತೇ? 

ಮೇ 25ರಂದು ಗೇಟ್ 7ರ ಬಳಿ ಸ್ಫೋಟ ಸಂಭವಿಸಿದ ನಂತರ ನ್ಯಾಯಾಧೀಶರು ಮತ್ತು ವಕೀಲರು ತಿರುಗಾಡುವ ಗೇಟುಗಳಿಗೆ  `ಕ್ಲೋಸ್ ಸರ್ಕ್ಯೂಟ್ ಟೀವಿ~ (ಸಿಸಿಟಿವಿ) ಹಾಗೂ ಲೋಹ ಶೋಧಕಗಳನ್ನು ಅಳವಡಿಸಲಾಯಿತು. ಆದರೆ ಕಕ್ಷಿಗಾರರು ಮತ್ತಿತರರು ಓಡಾಡುವ ಗೇಟ್ 4 ಮತ್ತು 5ಕ್ಕೆ ಇವೆರಡನ್ನು ಇನ್ನು ಅಳವಡಿಕೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.