ADVERTISEMENT

ಭಾರತದ ವಿರುದ್ಧ ಪೋರ್ಚುಗಲ್ ಸುಪ್ರೀಂಕೋರ್ಟ್ ತೀರ್ಪು

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

 ನವದೆಹಲಿ (ಪಿಟಿಐ): ಭೂಗತ ಪಾತಕಿ ಅಬು ಸಲೇಂ ವಿರುದ್ಧ ಮರಣದಂಡನೆ ಶಿಕ್ಷೆಗೆ ಕಾರಣವಾಗುವ ಹೊಸ ಆರೋಪಗಳನ್ನು ಹೊರಿಸಿದ ಕಾರಣ ಆರೋಪಿಯ ಹಸ್ತಾಂತರ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕೆಳನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪೋರ್ಚುಗಲ್ ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

2005ರಲ್ಲಿ ಭಾರತಕ್ಕೆ ಹಸ್ತಾಂತರನಾದ 43 ವರ್ಷದ ಸಲೇಂ, ಪೋರ್ಚುಗಲ್‌ನ ಲಿಸ್ಬನ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತನ್ನ ವಿಚಾರದಲ್ಲಿ ವಿಶೇಷ ನಿಯಮದ ಉಲ್ಲಂಘನೆ ಆಗಿರುವುದಾಗಿ ಆರೋಪಿಸಿದ ಕಾರಣ ಸೆಪ್ಟೆಂಬರ್ 19ರಂದು ತೀರ್ಪು ಪ್ರಕಟಿಸಿದ್ದ ನ್ಯಾಯಪೀಠ, ಭಾರತವು ಪೋರ್ಚುಗಲ್ ಆಡಳಿತಕ್ಕೆ ನೀಡಿದ್ದ ಮುಚ್ಚಳಿಕೆಯ  ಉಲ್ಲಂಘನೆ ಆಗಿರುವುದಾಗಿ ಹೇಳಿತ್ತು.

ಭಾರತವು ಪೋರ್ಚುಗಲ್‌ಗೆ ನೀಡಿದ ಈ ಅಧಿಕೃತ ಭರವಸೆಯಲ್ಲಿ `ಸಲೇಂ ವಿರುದ್ಧ ಮರಣದಂಡನೆ ಅಥವಾ 25 ವರ್ಷಕ್ಕಿಂತಲೂ ಮೇಲ್ಪಟ್ಟು ಜೈಲುಶಿಕ್ಷೆ ವಿಧಿಸುವ ಯಾವುದೇ ಕಾನೂನನ್ನು ಜಾರಿಗೊಳಿಸುವುದಿಲ್ಲ~ ಎಂದು ತಿಳಿಸಿತ್ತು. ಪೋರ್ಚುಗಲ್‌ನಲ್ಲಿ ಮರಣ ದಂಡನೆಯನ್ನು ರದ್ದುಪಡಿಸಲಾಗಿದ್ದು, ಇದರ ಆಧಾರದಲ್ಲಿ ಅಲ್ಲಿನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸಲೇಂ ಮೇಲೆ ಮರಣ ದಂಡನೆಗೆ ಕಾರಣವಾಗುವ ಆರೋಪ ಹೊರಿಸಿರುವುದನ್ನು ವಿರೋಧಿಸಿವೆ.

ವಿಚಾರಣೆ ನಿಲ್ಲಿಸಲು ಸಲೇಂ ಅರ್ಜಿ (ಮುಂಬೈ ವರದಿ): ಪೋರ್ಚುಗಲ್ ಸುಪ್ರೀಂಕೋರ್ಟ್, ತಮ್ಮ ಪ್ರಕರಣದಲ್ಲಿ ಭಾರತದಿಂದ ಹಸ್ತಾಂತರ ಒಪ್ಪಂದದ ನಿಯಮಗಳ ಉಲ್ಲಂಘನೆ ಆಗಿರುವುದಾಗಿ ಕೆಳನ್ಯಾಯಾಲಯ (ಲಿಸ್ಬನ್ ಹೈಕೋರ್ಟ್) ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವುದರಿಂದ, 1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ತಕ್ಷಣ ನಿಲ್ಲಿಸಬೇಕೆಂದು ಕೋರಿ ಭೂಗತ ಪಾತಕಿ ಅಬು ಸಲೇಂ ಮಂಗಳವಾರ ಸಂಜೆ ಟಾಡಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ವಿಶೇಷ ಟಾಡಾ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಿದ ಸಲೇಂ ಪರ ವಕೀಲ ರಷೀದ್ ಅನ್ಸಾರಿ, ಕೂಡಲೇ ವಿಚಾರಣೆ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಕೀಲರು, `ಇನ್ನು ಸಲೇಂ ವಿರುದ್ಧ ವಿಚಾರಣೆ ಮುಂದುವರಿಸುವುದು ಕಾನೂನುಬಾಹಿರ ಆಗಿರುವುದರಿಂದ, ವಿಚಾರಣೆ ನಿಲ್ಲಿಸಲು ಕೋರಿ ನಾವು ಅರ್ಜಿ ಸಲ್ಲಿಸಿದ್ದೇವೆ~ ಎಂದು ತಿಳಿಸಿದರು. ಸಲೇಂ ಅರ್ಜಿ ಬುಧವಾರ ಟಾಡಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿ ಸಿಬಿಐ ಸಹ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಈ ಹಿಂದೆ, ಪ್ರದೀಪ್ ಜೈನ್ ಕೊಲೆ ಪ್ರಕರಣದಲ್ಲಿ ಭಾರತಕ್ಕೆ ತನ್ನ ಹಸ್ತಾಂತರವನ್ನು ಪೋರ್ಚುಗಲ್ ನ್ಯಾಯಾಲಯ ರದ್ದುಪಡಿಸಿರುವುದರಿಂದ ತಮ್ಮ ವಿರುದ್ಧ 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆ ಮತ್ತು ಕಲಾಪಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ನವೆಂಬರ್ 8ರಂದು ನಿಯೋಜಿತ ಟಾಡಾ ನ್ಯಾಯಾಲಯ ವಜಾಗೊಳಿಸಿತ್ತು.
 
ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶ ಜಿ.ಎ. ಸನಾಪ್, `ಭಾರತ ಸರ್ಕಾರವು ಪೊರ್ಚುಗಲ್ ಸುಪ್ರೀಂಕೋರ್ಟ್‌ನಲ್ಲಿ ಲಿಸ್ಬನ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದು, ಇದರ ಅಂತಿಮ ಆದೇಶ ಹೊರಬೀಳುವವರೆಗೆ ಭಾರತೀಯ ನ್ಯಾಯಾಲಯಗಳಲ್ಲಿ ವಿಚಾರಣೆ ತಡೆಹಿಡಿಯಲಾಗದು~ ಎಂದಿದ್ದರು.

ಇದೇ ಅರ್ಜಿಯಲ್ಲಿ ಸಲೇಂ, `ಲಿಸ್ಬನ್ ಹೈಕೋರ್ಟ್‌ನ ವಿಚಾರಣಾ ಕಲಾಪ ಮುಗಿಯುವವರೆಗೆ ತನ್ನನ್ನು ಯಾವುದೇ ಭಾರತೀಯ ನ್ಯಾಯಾಲಯದಲ್ಲಿ ಹಾಜರುಪಡಿಸದಂತೆ ಜೈಲು ಆಡಳಿತಕ್ಕೆ ನಿರ್ದೇಶನ ನೀಡಬೇಕು~ ಎಂದು ಕೋರಿದ್ದನು. `ಪೋರ್ಚುಗಲ್ ನ್ಯಾಯಾಲಯವು ಭಾರತಕ್ಕೆ ತನ್ನ ಹಸ್ತಾಂತರವನ್ನು ರದ್ದುಗೊಳಿಸಿದ ನಂತರ ತನ್ನ ವಿರುದ್ಧ ದಾಖಲಿಸಿದ ಯಾವುದೇ ಪ್ರಕರಣದ ವಿಚಾರಣೆ ಮುಂದುವರಿಯುವಂತಿಲ್ಲ~ ಎಂದೂ ಆತ ವಾದಿಸಿದ್ದ.

ಆದರೆ ಸಿಬಿಐ ಇದನ್ನು ವಿರೋಧಿಸಿ, ಪೋರ್ಚುಗಲ್ ಸುಪ್ರೀಂಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬೀಳುವ ತನಕ ಸಲೇಂ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಬಾರದೆಂದು ಟಾಡಾ ನ್ಯಾಯಾಲಯವನ್ನು ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.