ADVERTISEMENT

ಭಾರತೀಯ ಯೋಧರ ಗುಂಡಿಗೆ ಎದೆಯೊಡ್ಡಿದ ಪಾಕ್‌ ಭಗ್ನ ಪ್ರೇಮಿ!

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫಿರೋಝಪುರ: ಪ್ರೇಮಿಯನ್ನು ಮದುವೆಯಾಗಲು ಸಾಧ್ಯವಾಗದೆ ಹತಾಶೆಗೊಂಡ ಪಾಕಿಸ್ತಾನದ ವ್ಯಕ್ತಿಯೊಬ್ಬ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಗುಂಡಿನ ದಾಳಿಯಲ್ಲಿ ಸಾವಿಗೀಡಾಗಲು ನಿರ್ಧರಿಸಿ ಭಾರತದ ಗಡಿ ಪ್ರದೇಶ ಪ್ರವೇಶಿಸಿದ ಪ್ರಕರಣ ನಡೆದಿದೆ.

ಈ ವ್ಯಕ್ತಿಯನ್ನು ಕಸೂರ್‌ ಜಿಲ್ಲೆಯ ಜಲ್ಲೊಕೆ ಗ್ರಾಮದ ಮೊಹಮ್ಮದ್‌ ಅಸೀಫ್‌ (32) ಎಂದು ಗುರುತಿಸಲಾಗಿದೆ.

ಸೋಮವಾರ ಮಬ್ಬೊಕೆ ಗಡಿ ಠಾಣೆಯಲ್ಲಿ ಈತನನ್ನು ಬಂಧಿಸಿದ ಬಿಎಸ್‌ಎಫ್‌ ಯೋಧರು, ಮಮ್ಡೊತ್‌ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ADVERTISEMENT

‘ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ರಂಜಾನ್‌ ತಿಂಗಳಲ್ಲಿ ಈ ರೀತಿ ಮಾಡಿಕೊಳ್ಳುವುದು ಸರಿ ಅಲ್ಲ ಎನಿಸಿತು. ಹೀಗಾಗಿ, ಭಾರತದ ಗಡಿ ಪ್ರವೇಶಿಸಿದೆ. ನನ್ನ ಹೃದಯಕ್ಕೆ ಬಿಎಸ್‌ಎಫ್‌ ಯೋಧರ ಗುಂಡು ಹಾರಿಸುತ್ತಾರೆ ಎಂದು ನಾನು ತಿಳಿದುಕೊಂಡಿದ್ದೆ’ ಎಂದು ಅಸೀಫ್‌ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.

‘ನನ್ನ ಹಿರಿಯ ಸಹೋದರನ ಪತ್ನಿಯ ತಂಗಿಯನ್ನು ಪ್ರೇಮಿಸಿದ್ದೆ. ಆದರೆ, ಅವಳನ್ನು ಮದುವೆಯಾಗಲು ಎರಡೂ ಕುಟುಂಬಗಳ ಒಪ್ಪಿಗೆ ದೊರೆಯಲಿಲ್ಲ. ಆಕೆಯ ಮದುವೆ ಇನ್ನೊಬ್ಬ ವ್ಯಕ್ತಿಯ ಜತೆ ನಡೆಯಿತು’ ಎಂದು ಮಾಹಿತಿ ನೀಡಿದ್ದಾನೆ.

‘ಆದರೆ, ಕೆಲವು ದಿನಗಳ ಹಿಂದೆ ವಿಚ್ಛೇದನವಾಯಿತು. ಆಗ ಮತ್ತೆ ಆಕೆಯನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದರೂ  ಕುಟುಂಬದ ಸದಸ್ಯರು ಒಪ್ಪಿಗೆ ಸೂಚಿಸಿಲ್ಲ. ಇದರಿಂದ ಬೇಸತ್ತು  ಆತ್ಮಹತ್ಯೆಗೆ ನಿರ್ಧರಿಸಿದೆ’ ಎಂದು ಅಸೀಫ್‌ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.